ಜಮ್ಮು ಕಾಶ್ಮೀರ: ಗಡಿ ಜಿಲ್ಲೆ ರಾಜೌರಿಯ ಸೇನಾ ಶಿಬಿರದ ಮೇಲೆ ಗುರುವಾರ ಬೆಳಗಿನ ಜಾವ ನಡೆದ ಆತ್ಮಹತ್ಯಾ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಇಬ್ಬರು ಫಿದಾಯಿನ್ ಉಗ್ರ ಆತ್ಮಹತ್ಯಾ ದಾಳಿಕೋರರು ಹತರಾಗಿದ್ದಾರೆ.
ಇಂದು ಮುಂಜಾನೆ ರಾಜೌರಿಯ ಪರ್ಗಲ್ ಪ್ರದೇಶದಲ್ಲಿ ಇಬ್ಬರು ಫಿದಾಯೀನ್‌ಗಳು ಸೇನಾ ಶಿಬಿರದೊಳಗೆ ನುಗ್ಗಲು ಯತ್ನಿಸಿದ್ದರು ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಡಿಯಲ್ಲಿ ನಿಯೋಜಿಸಲಾದ ಸೇನಾ ಸಿಬ್ಬಂದಿ ಉಗ್ರರನ್ನು ಪತ್ತೆಹಚ್ಚಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಎನ್‌ಕೌಂಟರ್‌ನಲ್ಲಿ ಇಬ್ಬರು ಫಿದಾಯೀನ್ ಉಗ್ರರು ಹತ್ಯೆಗೊಂಡಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ.
ದಾಳಿಯಲ್ಲಿ ಮೂವರು ಯೋಧರಿಗೆ ಗಾಯವಾಗಿದ್ದು, ವಿಶೇಷ ಚಿಕಿತ್ಸೆಗಾಗಿ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೆಚ್ಚುವರಿ ಸೇನೆ, ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.