ಉಡುಪಿ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಏರಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿಯಿಂದ ಕುಂಜಿಬೆಟ್ಟುವಿನ ಕಛೇರಿ ಬಳಿ ಪ್ರತಿಭಟನೆ ನಡೆಯಿತು. ಖಾಲಿ ಚೆಂಬು ಹಿಡಿದು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟಿಸಿ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಶಾಸಕ ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಗುರುರಾಜ್ ಗಂಟಿಹೊಳೆ ಭಾಗಿಯಾದರು.
ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಬೆಲೆ ಏರಿಕೆ ಮಾಡಿ ಉಳಿದ ರಾಜ್ಯಗಳಿಗೆ ಸರಿಸಮಾನವಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಉತ್ತರ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ 94 ರೂ. ಇದೆ. ಗುಜರಾತ್ ನಲ್ಲಿ 95 ಇದೆ, ಹರಿಯಾಣದಲ್ಲಿ 94 ರೂ. ಇದೆ ಎಂದರು. ಬೆಲೆ ಏರಿಕೆ ಮಾಡಬಾರದು ಐದು ವರ್ಷ ಗ್ಯಾರಂಟಿಯನ್ನು ಕೊಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ನಿರಂತರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ರಾಜ್ಯಗಳು ನಮಗೆ ಮೇಲ್ಪಂಕ್ತಿ ಯಾಗಬೇಕುವೆಂದು ಪ್ರಶ್ನೆ ಮಾಡಿದರು. ತೆಲಂಗಾಣದಲ್ಲಿ ರೂ. 107 ಇದೆ, ಈ ಕಾರಣಕ್ಕೋಸ್ಕರ ಕರ್ನಾಟಕದಲ್ಲಿ ರೂ. 103 ಇದೆ. ಕಾಂಗ್ರೆಸ್ ಆಳ್ವಿಕೆ ಇರುವ ಎಲ್ಲಾ ರಾಜ್ಯಗಳಲ್ಲಿ ಬೆಲೆ ಏರಿಕೆ ಆಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಚೊಂಬು ಪ್ರದರ್ಶಿಸಿದಿರಿ. ಇವತ್ತು ರಾಜ್ಯದಲ್ಲಿ ಜನರಿಗೆ ಚೊಂಬು ಕೊಟ್ಟಿದ್ದೀರಿ. 72 ಜನರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಕೊಟ್ಟಿದ್ದಾರಿ. ಅವರ ಟಿಎ, ಡಿಎ, ಪೆಟ್ರೋಲ್ ಖರ್ಚು ಕೊಡಲು ಸರ್ಕಾರ ಈ ದರ ಏರಿಕೆ ಮಾಡಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾವ ಸರ್ಕಾರಗಳು ಕ್ಯಾಬಿನೆಟ್ ಸಚಿವ ಸ್ಥಾನ ನೀಡಲಿಲ್ಲ. ರಾಜ್ಯ ಸರ್ಕಾರದ ಆದೇಶದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ. ಆದೇಶ ವಾಪಸ್ ಪಡೆಯುವ ತನಕ ಹೋರಾಟ ನಡೆಯಲಿದೆ. ಸಿದ್ದರಾಮಯ್ಯ ತಾನು ಮಾಡಿದ್ದನ್ನೆಲ್ಲಾ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ದುರಹಂಕಾರ ದೂರ ಮಾಡಿ ಜನಪರ ಆಡಳಿತ ನೀಡಿ. ಗ್ಯಾರೆಂಟಿ ಯೋಜನೆಗಳನ್ನು 5 ವರ್ಷ ಮುಂದುವರಿಸಲೇಬೇಕು. ಇದು ಚುನಾವಣೆಯ ಗ್ಯಾರೆಂಟಿಯಲ್ಲ 5 ವರ್ಷದ ಗ್ಯಾರಂಟಿ. ಅಭಿವೃದ್ಧಿ ಚಟುವಟಿಕೆಗಳು ಕೂಡ ಮಾಡಬೇಕು. ಜನರಿಗೆ ಹೆಚ್ಚುವರಿ ತೆರಿಗೆ ಹಾಕಬಾರದು. ಸರ್ಕಾರ ಇನ್ನು ಯಾವುದೇ ತೆರಿಗೆ ಹಾಕಲು ಬಾಕಿ ಇಲ್ಲ. ರಾಜ್ಯ ಸರ್ಕಾರ ತೊಲಗುವವರೆಗೆ ಬಿಜೆಪಿ ಹೋರಾಟ ನಡೆಸುತ್ತದೆ. ವಿಧಾನಸಭೆ ಅಧಿವೇಶನದಲ್ಲಿ ಬೆಲೆ ಏರಿಕೆ ಬಗ್ಗೆ ಚರ್ಚೆ ಆಗುತ್ತದೆ. ಆದೇಶ ವಾಪಸ್ ಪಡೆಯುವ ತನಕ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಸುನೀಲ್ ಕುಮಾರ್ ಹೇಳಿದರು.