ಯಲ್ಲಾಪುರ: ಉತ್ತರಪ್ರದೇಶ ವಾರಾಣಸಿಯಲ್ಲಿ ಜೂ. 18ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೃಷಿ ಸಖಿಯರ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ತಾಲೂಕಿನ ಜಂಬೆಸಾಲಿನ ಶ್ರೀಲತಾ ರಾಜೀವ ಭಾಗವಹಿಸಲಿದ್ದಾರೆ.
ಡೇ- ಎನ್‌ಆರ್‌ಎಲ್‌ಎಂ, ಎನ್‌ಎಂಎಂಯು, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯಗಳ ಸಹಯೋಗದಲ್ಲಿ ಸಂವಾದ ನಡೆಯಲಿದೆ. ನೈಸರ್ಗಿಕ ಕೃಷಿ ತರಬೇತಿ ಹೊಂದಿದ ಕೃಷಿ ಸಖಿಯರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಇದರಲ್ಲಿ ರಾಜ್ಯದ ಇಬ್ಬರು ಕೃಷಿ ಸಖಿಯರು ಭಾಗವಹಿಸುತ್ತಿದ್ದು, ಅವರಲ್ಲಿ ಶ್ರೀಲತಾ ಕೂಡ ಒಬ್ಬರು.
ನೈಸರ್ಗಿಕ ಕೃಷಿಯ ತರಬೇತಿ ಪ್ರಮಾಣ ಪತ್ರ ಪಡೆದಿರುವ ಶ್ರೀಲತಾ, ಪ್ರಗತಿಪರ ಕೃಷಿಕರಾಗಿ ಸಾಧನೆಯ ಹಾದಿಯಲ್ಲಿದ್ದಾರೆ. ಪ್ರಧಾನಿ ಮೋದಿ ಅವರೊಡನೆ ಸಂವಾದದಲ್ಲಿ ಭಾಗವಹಿಸುವ ಅವಿಸ್ಮರಣೀಯ ಕ್ಷಣಕ್ಕಾಗಿ ಕಾಯುತ್ತಿರುವುದಾಗಿ ಅವರು ಮಾಧ್ಯಮದೊಂದಿಗೆ ಸಂತಸ ಹಂಚಿಕೊಂಡರು.