ಸ್ಪೀಕರ್‌ ಹುದ್ದೆ ಬಿಜೆಪಿಗೆ, ಡೆಪ್ಯೂಟಿ ಸ್ಪೀಕರ್‌ ಹುದ್ದೆ ಎನ್‌ಡಿಎ ಮಿತ್ರ ಪಕ್ಷಕ್ಕೆ?

ನವದೆಹಲಿ: ಲೋಕಸಭೆಯ ಸ್ಪೀಕರ್‌ ಹುದ್ದೆಯನ್ನು ಬಿಜೆಪಿ ತನ್ನ ಬಳಿಯೇ ಇಟ್ಟುಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ.

ಹೌದು. ಎರಡೂ ಅವಧಿಯಲ್ಲಿ ಬಿಜೆಪಿ ಸ್ಪೀಕರ್‌ ಹುದ್ದೆಯನ್ನು ತನ್ನ ಬಳಿಯೇ ಇಟ್ಟುಕೊಂಡಿತ್ತು. ಈಗ ಮೂರನೇ ಅವಧಿಯಲ್ಲೂ ಬಿಜೆಪಿ ಸ್ಪೀಕರ್‌ ಹುದ್ದೆಯನ್ನು ತನ್ನ ಬಳಿಯೇ ಇಟ್ಟುಕೊಂಡು, ಡೆಪ್ಯೂಟಿ ಸ್ಪೀಕರ್‌ ಹುದ್ದೆಯನ್ನು ಎನ್‌ಡಿಎ ಮಿತ್ರಕೂಟಕ್ಕೆ ನೀಡಲು ಮುಂದಾಗಿದೆ.‌

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅವರಿಗೆ ಸ್ಪೀಕರ್‌ ಹುದ್ದೆ ಆಯ್ಕೆ ಸಂಬಂಧ ಮಿತ್ರ ಪಕ್ಷಗಳ ಜೊತೆ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರಲು ಸೂಚಿಸಲಾಗಿದೆ.

ಬಿಜೆಪಿ ಬಹುಮತ ಹೊಂದಿದ್ದ ಎರಡು ಅವಧಿಯಲ್ಲಿ ಕ್ರಮವಾಗಿ ಸುಮಿತ್ರಾ ಮಹಾಜನ್ ಮತ್ತು ಓಂ ಬಿರ್ಲಾ ಅವರು ಸ್ಪೀಕರ್ ಆಗಿದ್ದರು. ಆದರೆ ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದೇ ಇದ್ದಾಗ ಸ್ಪೀಕರ್‌ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಸ್ಪೀಕರ್‌ ಹುದ್ದೆಗೆ ಭಾರೀ ಮಹತ್ವವಿದೆ. ಸಂಸದರು ಪಕ್ಷಾಂತರ ನಡೆಸಿದ ಸಂದರ್ಭದಲ್ಲಿ ಆ ಸಂಸದರನ್ನು ಅನರ್ಹ ಮಾಡಬೇಕೇ? ಬೇಡವೇ ಎಂಬ ಮಹತ್ವದ ತೀರ್ಮಾನವನ್ನು ಸ್ಪೀಕರ್‌ ತೆಗೆದುಕೊಳ್ಳುತ್ತಾರೆ.

ಈ ಹಿಂದೆ ವರದಿ ಪ್ರಕಾರ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಸ್ಪೀಕರ್‌ ಹುದ್ದೆಗೆ ಬೇಡಿಕೆ ಇಟ್ಟಿತ್ತು ಎಂದು ವರದಿಯಾಗಿತ್ತು. ಜೂನ್‌ 24 ರಿಂದ ಲೋಕಸಭಾ ಅಧಿವೇಶನ ನಡೆಯಲಿದ್ದು ಜುಲೈ 3ರವರೆಗೆ ನಡೆಯಲಿದೆ. ಈ ಅಧಿವೇಶನದ ಅವಧಿಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.