ನವದೆಹಲಿ, ಜೂನ್ 12: ಪ್ರಸಕ್ತ ವರ್ಷದಿಂದ ಆರಂಭವಾಗಿ ಮುಂದಿನ ಮೂರು ವರ್ಷ ಭಾರತದ ಆರ್ಥಿಕತೆ ಸ್ಥಿರ ವೇಗದಲ್ಲಿ ಬೆಳೆಯುತ್ತದೆ. ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ಅತಿವೇಗವಾಗಿ ಬೆಳವಣಿಗೆ ಕಾಣಲಿದೆ. ಮೂರು ವರ್ಷ ಶೇ. 6.7ರ ಜಿಡಿಪಿ ದರ ಭಾರತದ್ದಾಗಿರಲಿದೆ ಎಂದು ವಿಶ್ವಬ್ಯಾಂಕ್ನ ವರದಿಯೊಂದರಲ್ಲಿ ಹೇಳಲಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.3ರಷ್ಟು ಮಾತ್ರವೇ ಬೆಳೆಯಬಹುದು ಎಂದು ಜನವರಿಯ ವರದಿಯಲ್ಲಿ ವರ್ಲ್ಡ್ ಬ್ಯಾಂಕ್ ಹೇಳಿತ್ತು. ಇದೀಗ ಕೊನೆಯ ಕ್ವಾರ್ಟರ್ನಲ್ಲೂ ಭಾರತದ ಆರ್ಥಿಕತೆ ಉತ್ತಮವಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಹೊಸ ವರದಿಯಲ್ಲಿ ಆ ವರ್ಷದ ಭಾರತದ ಬೆಳವಣಿಗೆ ದರವನ್ನು ಶೇ. 8.2ರಷ್ಟಿರಬಹುದು ಎಂದು ಅದು ಅಂದಾಜಿಸಿದೆ.
ಇದೇ ವೇಳೆ, 2024ರ ಕ್ಯಾಲಂಡರ್ ವರ್ಷದಲ್ಲಿ ಜಾಗತಿಕವಾಗಿ ಸರಾಸರಿ ಆರ್ಥಿಕ ಬೆಳವಣಿಗೆ ಶೇ. 2.6ರಷ್ಟು ಇರಲಿದೆ. 2025-26ರ ಹಣಕಾಸು ವರ್ಷದಲ್ಲಿ ಇದು ಸರಾಸರಿಯಾಗಿ ಶೇ 2.7ರಷ್ಟು ಇರಬಹುದು ಎಂದು ಈ ವರದಿ ಅಭಿಪ್ರಾಯಪಟ್ಟಿದೆ. ಇದಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆಯ ವೇಗ ಬಹಳ ಎತ್ತರದಲ್ಲಿ ಇದೆ. ಆದರೂ ಕೂಡ ಭಾರತದ ಈಗಿನ ಆರ್ಥಿಕ ಓಟದ ವೇಗಕ್ಕೆ ಹೋಲಿಸಿದರೆ ಇದು ಕಡಿಮೆಯೇ.
ವಿಶ್ವ ಬ್ಯಾಂಕ್ ವರದಿಯಲ್ಲಿನ ಇನ್ನೊಂದು ಪ್ರಮುಖ ಅಂಶವೆಂದರೆ, ವಿಶ್ವದ ಶೇ. 80ರಷ್ಟು ಜನಸಂಖ್ಯೆ ಇರುವ ದೇಶಗಳಲ್ಲಿ ಜಿಡಿಪಿ ಬೆಳವಣಿಗೆ ಕೋವಿಡ್ ಪೂರ್ವದ ಮಟ್ಟದಲ್ಲಿದ್ದುದಕ್ಕಿಂತಲೂ ನಿಧಾನಗತಿಯಲ್ಲಿ ಇರಲಿದೆಯಂತೆ. ಭಾರತ, ಪಾಕಿಸ್ತಾನ ಮೊದಲಾದ ದೇಶಗಳಿರುವ ದಕ್ಷಿಣ ಏಷ್ಯಾ ಪ್ರದೇಶದಲ್ಲಿ 2023ರಲ್ಲಿ ಸರಾಸರಿ ಜಿಡಿಪಿ ಬೆಳವಣಿಗೆ ಶೇ. 6.6ರಷ್ಟಿತ್ತು. 2024ರಲ್ಲಿ ಇದು ಶೇ. 6.2ಕ್ಕೆ ಇಳಿಯಬಹುದು. ಭಾರತದಲ್ಲಿ ಆರ್ಥಿಕತೆ ಮಂದಗೊಳ್ಳುವ ಸಾಧ್ಯತೆ ಇರುವುದು ಈ ಇಳಿಮುಖಕ್ಕೆ ಕಾರಣ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
2023-24ರಲ್ಲಿ ತೋರಿದ ಆರ್ಥಿಕ ಬೆಳವಣಿಗೆಯ ವೇಗವನ್ನು ಭಾರತಕ್ಕೆ ಕಾಯ್ದುಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಹೂಡಿಕೆಗಳು ಹೆಚ್ಚಾಗುತ್ತಿರುವುದು ಹೌದಾದರೂ ಅವಶ್ಯಕತೆಯಷ್ಟು ಆಗದೇ ಇರಬಹುದು. ಇದು ಜಿಡಿಪಿ ದರ ಕಡಿಮೆಗೊಳ್ಳಲು ಕಾರಣವಾಗಬಹುದು ಎಂಬ ಸಂಗತಿಯನ್ನು ವಿಶ್ವ ಬ್ಯಾಂಕ್ ವರದಿಯಲ್ಲಿ ಕಾಣಬಹುದಾಗಿದೆ.