ಶ್ರೀನಗರ ಜೂನ್ 12 : ಜಮ್ಮು ಮತ್ತು ಕಾಶ್ಮೀರದ ಕಥುವಾ ಗ್ರಾಮವೊಂದರಲ್ಲಿ ಮಂಗಳವಾರ ತಡರಾತ್ರಿ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಅರೆಸೇನಾಪಡೆಯ ಯೋಧರೊಬ್ಬರು ಕೂಡ ಸಾವನ್ನಪ್ಪಿದ್ದಾರೆ. ಜಮ್ಮುವಿನಲ್ಲಿ ರಾತ್ರೋರಾತ್ರಿ ಆರಂಭವಾದ 2 ಎನ್‌ಕೌಂಟರ್‌ಗಳು ಬೆಳಗಿನ ಜಾವದವರೆಗೂ ನಡೆದಿದೆ. ಅಲ್ಲಿ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ ಸೇನಾ ಪೋಸ್ಟ್‌ನ ಮೇಲಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಜಮ್ಮುವಿನಲ್ಲಿ ಈ 2 ಭಯೋತ್ಪಾದಕ ಘಟನೆಗಳು ನಡೆಯುವ ಕೇವಲ 2 ದಿನಗಳ ಮೊದಲು, ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ರಿಯಾಸಿಯಲ್ಲಿ ದಾಳಿಗೆ ಒಳಗಾಗಿತ್ತು. ಗುಂಡಿನ ದಾಳಿಯಿಂದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿತ್ತು. ಈ ವೇಳೆ 9 ಪ್ರಯಾಣಿಕರು ಸಾವನ್ನಪ್ಪಿದ್ದರು ಮತ್ತು 30 ಜನ ಗಾಯಗೊಂಡಿದ್ದಾರೆ.
ಕಥುವಾದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಇಂದು ಬೆಳಿಗ್ಗೆ ಎನ್‌ಕೌಂಟರ್‌ಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.
ದೋಡಾ ಘಟನೆಯ ಕುರಿತು ಮಾತನಾಡಿದ ಅವರು, ನಿನ್ನೆ ತಡರಾತ್ರಿ ಚಟರ್ಗಾಲಾ ಪ್ರದೇಶದ ಸೇನಾ ನೆಲೆಯಲ್ಲಿ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಜಂಟಿ ಪಾರ್ಟಿಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಉನ್ನತ ಮಟ್ಟದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಿನ್ನೆ ಸಂಜೆ ಕಥುವಾ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಭಾಗಿಯಾಗಿದ್ದು, ಅವರಲ್ಲಿ ಒಬ್ಬನನ್ನು ನಿನ್ನೆ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡನೇ ಭಯೋತ್ಪಾದಕ ಯುಎಸ್ ನಿರ್ಮಿತ ಎಂ4 ಕಾರ್ಬೈನ್ ಅಸಾಲ್ಟ್ ರೈಫಲ್‌ನೊಂದಿಗೆ ಶಸ್ತ್ರಸಜ್ಜಿತನಾಗಿದ್ದನು. ಆತ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದ. ಆತನನ್ನು ಇಂದು ಬೆಳಿಗ್ಗೆ ಎನ್ಕೌಂಟ್ ಮಾಡಲಾಯಿತು.
ಅಡಗಿಕೊಂಡಿದ್ದ ಭಯೋತ್ಪಾದಕರು ಹಲವಾರು ಮನೆಗಳಿಗೆ ತೆರಳಿ ನೀರು ಕೇಳಿದರು. ಇದರಿಂದ ಗ್ರಾಮಸ್ಥರು ಅನುಮಾನಗೊಂಡರು. ಈ ಬಗ್ಗೆ ಕೆಲವು ಗ್ರಾಮಸ್ಥರು ಎಚ್ಚರಿಕೆ ನೀಡಿದಾಗ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಒಬ್ಬ ನಾಗರಿಕ ಗಾಯಗೊಂಡಿದ್ದಾನೆ.
2 ದಿನಗಳ ಹಿಂದೆ, ರಿಯಾಸಿಯಲ್ಲಿ ಶಿವ ಖೋರಿ ಗುಹೆ ದೇವಸ್ಥಾನಕ್ಕೆ ತೆರಳುತ್ತಿದ್ದ ಬಸ್ ಮೇಲೆ ದಾಳಿ ನಡೆಸಲಾಯಿತು. ಬಸ್ ಚಾಲಕ ಪ್ರಯಾಣಿಕರನ್ನು ಇಳಿಸಲು ನಿರಾಕರಿಸಿದ ನಂತರ ಭಯೋತ್ಪಾದಕರು ಗುಂಡು ಹಾರಿಸಿದರು. ಆದರೆ, ನಿಯಂತ್ರಣ ಕಳೆದುಕೊಂಡು ಬಸ್ ಕಂದಕಕ್ಕೆ ಬಿದ್ದಿದೆ ಎಂದು ಬಸ್ ಕಂಪನಿಯ ವ್ಯವಸ್ಥಾಪಕರು ತಿಳಿಸಿದ್ದಾರೆ. ಈ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಬು ಹಮ್ಜಾ ನಿರ್ದೇಶನದ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.