ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಹಾಗೂ ಗಾಯಾಳುಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ 50,000 ರೂ. ನೆರವು ನೀಡುವುದಾಗಿ ಪ್ರಧಾನಿ ಕಾರ್ಯಾಲಯ ಘೋಷಿಸಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಡೆದ ರೈಲು ದುರಂತವು ಕಳೆದ ವರ್ಷ ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ದುರಂತವನ್ನೇ ನೆನಪಿಸಿದೆ. ಈ ಹೊತ್ತಿನಲ್ಲಿ ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ಸಂಭವಿಸಿದ ಭೀಕರ ರೈಲು ದುರಂತಗಳ ಬಗ್ಗೆ ತಿಳಿಯುವುದು ಮುಖ್ಯವಾಗಿದೆ.
ಡೆಡ್ಲಿ ರೈಲು ದುರಂತಗಳು:
2023: ಒಡಿಶಾದ ಬಾಲಸೋರ್‌ನಲ್ಲಿ ಟ್ರಿಪಲ್ ರೈಲು ಅಪಘಾತದಲ್ಲಿ ಸುಮಾರು 300 ಜನ ಸಾವನ್ನಪ್ಪಿದರು ಮತ್ತು 1,000ಕ್ಕೂ ಹೆಚ್ಚು ಜನರು ಗಾಯಗೊಂಡರು.
2016: ಉತ್ತರ ಪ್ರದೇಶದ ಕಾನ್ಪುರ ಬಳಿ ಇಂದೋರ್-ಪಾಟ್ನಾ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ ಕನಿಷ್ಠ 150 ಪ್ರಯಾಣಿಕರು ಸಾವನ್ನಪ್ಪಿದರು.
2010: ಪಶ್ಚಿಮ ಬಂಗಾಳದಲ್ಲಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 146 ಜನರು ಸಾವನ್ನಪ್ಪಿದರು.
2002: ಕೋಲ್ಕತ್ತಾ-ನವದೆಹಲಿ ರಾಜಧಾನಿ ಧಬಿ ನದಿಯಲ್ಲಿ ಮುಳುಗಿ ಕನಿಷ್ಠ 120 ಜನರು ಸಾವನ್ನಪ್ಪಿದರು.
1999: ಪಶ್ಚಿಮ ಬಂಗಾಳದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 285 ಜನರು ಸಾವನ್ನಪ್ಪಿದರು.
1998: ಪಂಜಾಬ್‌ನಲ್ಲಿ ಹಳಿ ತಪ್ಪಿದ ರೈಲಿಗೆ ಸೀಲ್ದಾ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ಕನಿಷ್ಠ 210 ಜನರು ಸಾವನ್ನಪ್ಪಿದರು.
1995: ಆಗ್ರಾ ಬಳಿಯ ಫಿರೋಜಾಬಾದ್‌ನಲ್ಲಿ ಪುರುಷೋತ್ತಮ್ ಎಕ್ಸ್‌ಪ್ರೆಸ್‌ಗೆ ಕಾಳಿಂದಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ಡಾರ್ಜಿಲಿಂಗ್ ಘಟನೆ ಏನು?
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಗೂಡ್ಸ್ ರೈಲೊಂದು ಹಿಂಬದಿಯಿಂದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸಾವಿನ ಸಂಖ್ಯೆ 9ಕ್ಕೆ ಏರಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ. ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಸಿಲ್ಚಾರ್‌ನಿಂದ ಕೋಲ್ಕತ್ತಾದ ಸೀಲ್ದಾಗೆ ಚಲಿಸುತ್ತಿದ್ದ ಸಂದರ್ಭ ನ್ಯೂ ಜಲ್ಪೈಗುರಿ ಸಮೀಪದ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿತಪ್ಪಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಇಲ್ಲಿಯವರೆಗೆ ದೊರೆತ ಮಾಹಿತಿಯ ಪ್ರಕಾರ, ಗೂಡ್ಸ್ ರೈಲು ಸಿಗ್ನಲ್ ಅನ್ನು ಮೀರಿದ ಪರಿಣಾಮ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಮತ್ತು ಅಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೋಡಗಿಕೊಂಡಿವೆ. ಜನರು ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ರೈಲ್ವೆ ಇಲಾಖೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.