ರೆಮಲ್ ಚಂಡಮಾರುತ ಎಫೆಕ್ಟ್: ವಿಮಾನಯಾನ ಸೇವೆ ವ್ಯತ್ಯಯ, ಊಟ, ನೀರಿಲ್ಲದೆ ಕನ್ನಡಿಗರ ಪರದಾಟ

ಚಿತ್ರದುರ್ಗ, ಮೇ 27: ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳವನ್ನ ಕಾಡಿದ್ದ ರೆಮಲ್ ಚಂಡಮಾರುತ ಭೂಸ್ಪರ್ಶ ಮಾಡಿದೆ. ಮಧ್ಯರಾತ್ರಿ 12.30ರ ಸುಮಾರಿಗೆ ಚಂಡಮಾರುತ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದೆ. ರೆಮಲ್ ಚಂಡಮಾರುತ ಎಫೆಕ್ಟ್ ಹಿನ್ನೆಲೆ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಅಂಡಮಾನ್ ನಿಕೋಬಾರ್​ನಲ್ಲಿ ಸಿಲುಕಿದ ಕನ್ನಡಿಗರಿಗೆ ಸಂಕಷ್ಟ ಎದುರಾಗಿದೆ.

ಮೈಸೂರು, ದಾವಣಗೆರೆ ಸೇರಿ ವಿವಿಧೆಡೆಯಿಂದ ಅಂಡಮಾನ್ ನಿಕೋಬಾರ್​ಗೆ ಕನ್ನಡಿಗರು ತೆರಳಿದ್ದಾರೆ. ಆದರೆ ರೆಮಲ್ ಚಂಡಮಾರುತ ಹಿನ್ನೆಲೆ ವಿಸ್ತಾರ ವಿಮಾನ ಯಾನ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಬೆಳಗ್ಗೆ 11ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 180 ಜನ ಸಂಜೆಯಾದರೂ ವಿಮಾನವಿಲ್ಲದೇ ಕಂಗಾಲಾಗಿದ್ದಾರೆ. ಆಹಾರ, ನೀರು ಸಹ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಹವಾಮಾನ ವೈಪರೀತ್ಯದಿಂದ ಚೆನ್ನೈಗೆ ವಿಮಾನ ವಾಪಸ್​ ಹಿನ್ನೆಲೆ ಸಂಕಷ್ಟ ಎದುರಾಗಿದೆ. ವಿಮಾನಗಳ ವ್ಯತ್ಯಯದಿಂದ ಅಂಡಮಾನ್ ನಿಕೊಬಾರ್ ಪೋರ್ಟ್​​ ಬ್ಲೇರ್​ನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್ ಪೋರ್ಟ್ ಸಿಬ್ಬಂದಿ ಜತೆ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು ವಾಗ್ವಾದ ಮಾಡಿದ್ದಾರೆ. ಮೈಸೂರು ಮೂಲದ ನಿವೃತ್ತ ಪ್ರಾಂಶುಪಾಲರು ಪರಮೇಶ್ ಎಂಬುವವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯ ಹಸ್ತಕ್ಕೆ ಮನವಿ ಮಾಡಿದ್ದಾರೆ.

ರೆಮಲ್ ಚಂಡಮಾರುತದ ಎಫೆಕ್ಟ್‌ ಕರ್ನಾಟಕದ ಮೇಲೂ ಆಗಿದೆ. ಸೈಕ್ಲೋನ್‌ನಿಂದ ಪೂರ್ವ ಮುಂಗಾರು ಮಳೆ ಕಡಿಮೆಯಾಗಿದೆ. ಆದರೆ ಮೇ 30ರ ಬಳಿಕ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತೆ ಅಂತ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರೆಮಲ್ ಚಂಡಮಾರುತದಿಂದ ಅರಬ್ಬೀ ಸಮುದ್ರದಲ್ಲಿ 35 ರಿಂದ 40 ಕಿಲೋಮೀಟರ್‌ಗೂ ಅಧಿಕ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಜಿಲ್ಲಾಡಳಿತ ಸಮುದ್ರಕ್ಕಿಳಿಯದಂತೆ ನಿಷೇಧ ಹೇರಿದೆ. ಆದರೆ ಎಚ್ಚರಿಕೆ ನಾಮಫಲಕವಾಗಲಿ, ಸಿಬ್ಬಂದಿ ಗಸ್ತು ವ್ಯವಸ್ಥೆ ಇಲ್ಲದ್ದರಿಂದ ಪ್ರವಾಸಿಗರು ಸಮುದ್ರಕ್ಕಿಳಿದು ಮೋಜು ಮಸ್ತಿಯಲ್ಲಿ ತೊಡಗಿದ್ದರು.