ಕೋಲ್ಕತ್ತಾ: ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ನೆರೆಯ ಬಾಂಗ್ಲಾದೇಶದಲ್ಲಿ ಅಬ್ಬರಿಸಿದೆ. ಇಲ್ಲಿ ಗಂಟೆಗೆ 135 ಕಿಮೀ ವೇಗದಲ್ಲಿ ಬೀಸುವ ಮೂಲಕ ಪಶ್ಚಿಮ ಬಂಗಾಳ ಮತ್ತು ಅದರ ಕರಾವಳಿ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಆಸ್ತಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸೆಂಟ್ರಲ್ ಕೋಲ್ಕತ್ತಾದ ಎಂಟಾಲಿಯ ಬಿಬಿರ್ ಬಗಾನ್ ಪ್ರದೇಶದಲ್ಲಿ ಭಾನುವಾರ ಸಂಜೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗೋಡೆ ಕುಸಿದು ವ್ಯಕ್ತಿಯೊಬ್ಬರು ಗಾಯಗೊಂಡು ಸಾವಿಗೀಡಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಂದರ್‌ಬನ್ಸ್ ಡೆಲ್ಟಾದ ಪಕ್ಕದಲ್ಲಿರುವ ನಮ್‌ಖಾನಾ ಬಳಿಯ ಮೌಸುನಿ ದ್ವೀಪದಲ್ಲಿ ಹಿರಿಯ ಮಹಿಳೆಯೊಬ್ಬರು ಸೋಮವಾರ ಬೆಳಿಗ್ಗೆ ಸಾವಿಗೀಡಾಗಿದ್ದಾರೆ. ಆಕೆಯ ಗುಡಿಸಲಿನ ಮೇಲೆ ಮರ ಬಿದ್ದು ಚಾವಣಿ ಕುಸಿದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇಲ್ಲಿನ ಹುಲ್ಲಿನ ಗುಡಿಸಲುಗಳ ಮೇಲ್ಛಾವಣಿಗಳು ಹಾರಿಹೋಗಿವೆ, ಮರಗಳು ಬೇರುಸಹಿತ ಬಿದ್ದಿದ್ದು,ಕೋಲ್ಕತ್ತಾ ಮತ್ತು ಕರಾವಳಿ ಜಿಲ್ಲೆಗಳಲ್ಲಿ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ನಗರದ ಹೊರವಲಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವನ್ನು ಉಂಟುಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..