ನವದೆಹಲಿ: ಇಂದು 6ನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 889 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ (ECI) ತಿಳಿಸಿದೆ. 7 ಸಂಸದೀಯ ಸ್ಥಾನಗಳನ್ನು ಹೊಂದಿರುವ ರಾಷ್ಟ್ರ ರಾಜಧಾನಿ ದೆಹಲಿ ಕೂಡ ಮತದಾನಕ್ಕೆ ಸಜ್ಜಾಗಿದೆ. ಜೂನ್ 4ರಂದು ಎಲ್ಲ ಹಂತಗಳ ಚುನಾವಣೆಯ ಮತ ಎಣಿಕೆ ನಡೆಯಲಿದೆ.
ಇಂದು ಬಿಹಾರ (8 ಸ್ಥಾನಗಳು), ಹರಿಯಾಣ (ಎಲ್ಲಾ 10 ಸ್ಥಾನಗಳು), ಜಮ್ಮು ಮತ್ತು ಕಾಶ್ಮೀರ (1 ಸ್ಥಾನ), ಜಾರ್ಖಂಡ್ (4 ಸ್ಥಾನಗಳು), ದೆಹಲಿ (ಎಲ್ಲಾ 7 ಸ್ಥಾನಗಳು), ಒಡಿಶಾ (6 ಸ್ಥಾನಗಳು), ಉತ್ತರ ಪ್ರದೇಶ (14 ಸ್ಥಾನಗಳು), ಮತ್ತು ಪಶ್ಚಿಮ ಬಂಗಾಳ (8 ಸ್ಥಾನಗಳು)ದಲ್ಲಿ ಮತದಾನ ನಡೆಯಲಿದೆ.
ತೀವ್ರ ಕುತೂಹಲ ಮೂಡಿಸಿರುವ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 4 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಉಳಿದ 3 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ವಿರುದ್ಧ ಎಎಪಿ ಮತ್ತು ಕಾಂಗ್ರೆಸ್ ಜಂಟಿಯಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಮೊದಲ ಲೋಕಸಭೆ ಚುನಾವಣೆ ಇದಾಗಿದ್ದು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ.
899 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 1.52 ಕೋಟಿ ಮತದಾರರು ಇಂದು ಮತ ಚಲಾಯಿಸಲಿದ್ದಾರೆ. 82 ಲಕ್ಷ ಪುರುಷ ಮತ್ತು 69 ಲಕ್ಷ ಮಹಿಳಾ ಮತದಾರರು ಹಾಗೂ 1,228 ತೃತೀಯಲಿಂಗಿ ಮತದಾರರು ಸೇರಿದಂತೆ ಒಟ್ಟು 1.52 ಕೋಟಿ ಮತದಾರರು 13,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಲು ಅರ್ಹರಾಗಿದ್ದಾರೆ.