ಏನನ್ನಾದರೂ ಸಾಧಿಸುತ್ತೇನೆಂಬ ಛಲ ಹೊಂದಿದ್ದರೆ ಎಂತಹದ್ದೇ ಕಷ್ಟ ಬಂದರೂ ಅದನ್ನು ಎದುರಿಸಿ ನಿಲ್ಲಬಹುದು. ಅದೇ ರೀತಿ ಇಲ್ಲೊಬ್ಬ ಯುವತಿ ಅಂಗವೈಕಲ್ಯ ಕೇವಲ ದೇಹಕ್ಕೆ ಹೊರತು, ಮನಸ್ಸಿಗಲ್ಲ, ದುಡಿಯುವ ಹುಮ್ಮಸ್ಸು, ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ನನ್ನಲ್ಲಿದೆ ಎನ್ನುತ್ತಾ ಸಣ್ಣ ಹೋಟೇಲ್ ಉದ್ಯಮಕ್ಕೆ ಇಳಿದು, ಇಂದು ಯಶಸ್ವಿಯಾಗಿ ತನ್ನ ಉದ್ಯಮವನ್ನು ನಡೆಸುತ್ತಿದ್ದಾಳೆ. ಒಂದು ಕಾಲು ಇಲ್ಲದ್ದರೂ ದುಡಿಯುವ ಛಲ, ಈಕೆಯ ಜೀವನೋತ್ಸಾಹ ನಿಜಕ್ಕೂ ಸ್ಫೂರ್ತಿದಾಯಕ ಎಂದು ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಈಕೆಯ ಸ್ಟೋರಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ “ಕರಿ ದೋಸಾ” ಸ್ಟಾಲ್ ಮಾಲೀಕರಾದ ವೀಣಾ ಅಂಬರೀಶ್ ಎಂಬ ಯುವತಿಯ ಸ್ಪೂರ್ತಿದಾಯಕ ಕಥೆಯಿದು. ಭರತನಾಟ್ಯ ಕಲಾವಿದೆಯಾದ ವೀಣಾ ತನ್ನ 17 ನೇ ವಯಸ್ಸಿನಲ್ಲಿ ಬಸ್ ಅಪಘಾತವೊಂದರಲ್ಲಿ ಬಲಗಾಲನ್ನು ಕಳೆದುಕೊಳ್ಳುತ್ತಾಳೆ. ಈ ಭೀಕರ ಅಪಘಾತದ ಆಘಾತದಿಂದ ಖಿನ್ನತೆ ಜಾರಿದ ವೀಣಾ ಆತ್ಮಹತ್ಯೆ ಮಾಡಲು ನಿರ್ಧರಿಸಿದ್ದುಂಟು. ಕೊನೆಗೆ ಅಂಗವೈಕಲ್ಯ ಕೇವಲ ದೇಹಕ್ಕೆ ಹೊರತು, ಮನಸ್ಸಿಗಲ್ಲ ಎಂದು ಬದುಕುವ ದೃಢ ನಿರ್ಧಾರ ಮಾಡಿ ವಿದ್ಯಾಭ್ಯಾಸವನ್ನು ಮುಂದುವರೆಸಿ, ಎಂ.ಬಿ.ಎ ಪದವಿಯನ್ನು ಪಡೆದು IT ಕಂಪೆನಿಯೊಂದರಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾಳೆ ವೀಣಾ. ಆದರೆ ಸುದೀರ್ಘ ಕಾಲ ಕುಳಿತು ಕೆಲಸ ಮಾಡಲು ಸಾಧ್ಯವಾಗದ ಕಾರಣ, ಐಟಿ ಕೆಲಸವನ್ನು ಬಿಡಬೇಕಾಗುತ್ತದೆ. ಆದರೆ ನಂತರ ಜೀವನ ಮುನ್ನಡೆಸಲು ಏನು ಮಾಡುವುದು ಎಂದು ಯೋಚಿಸಿದ ವೀಣಾ, ನನಗೆ ಅಡುಗೆ ಮಾಡುವುದೆಂದರೆ ತುಂಬಾನೇ ಇಷ್ಟ ಅಲ್ವಾ, ಅದ್ರಲ್ಲೇ ಏನಾದ್ರೂ ಸಾಧನೆ ಮಾಡ್ತೀನಿ ಎಂದು, 2023 ರಲ್ಲಿ ಬೆಂಗಳೂರಿನಲ್ಲಿ “ಕರಿ ದೋಸಾ” ಎಂಬ ಹೆಸರಿನ ದೋಸೆ ಸ್ಟಾಲ್ ಒಂದನ್ನು ಓಪನ್ ಮಾಡುತ್ತಾಳೆ. ಇದೀಗ ಆಕೆ ಯಶಸ್ವಿಯಾಗಿ ತಮ್ಮ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ.
ವೀಣಾ ಅಂಬರೀಶ್ ಕುರಿತ ಈ ಸ್ಪೂರ್ತಿದಾಯಕ ಕಥೆಯನ್ನು ವಿವಿಎಸ್ ಲಕ್ಷ್ಮಣ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಧೃತಿಗೆಡದೆ ಗಟ್ಟಿಯಾಗಿ ನಿಲ್ಲಬೇಕು ಎಂಬ ವೀಣಾ ನಿಲುವು ನಮಗೆಲ್ಲರಿಗೂ ಸ್ಫೂರ್ತಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಮೇ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ದಿಟ್ಟ ಹೆಣ್ಣು ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿ ಎಂದು ವೀಣಾ ಅವರನ್ನು ನೆಟ್ಟಿಗರು ಕೊಂಡಾಡಿದ್ದಾರೆ.