ಅಂಕೋಲಾ ಮಾರ್ಚ್ 13 : ರಾತ್ರಿಯ ವೇಳೆ ಬೈಕ್ ನಲ್ಲಿ ತೆರಳುವಾಗ ವೈಷಮ್ಯದಿಂದ ಜಗಳ ತೆಗೆದು ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಘಟನೆ ತಾಲ್ಲೂಕಿನ ಕೆಳಗಿನ ಮಂಜಗುಣಿಯ ಬಳಿ ನಡೆದಿದೆ. ಹಲ್ಲೆಗೆ ಒಳಗಾದ ತಾಲ್ಲೂಕಿನ ಬೆಳಂಬಾರ ತಾಳೆಬೈಲ್ ನಿವಾಸಿ ಗಂಗಾಧರ ಸುಕ್ರು ಗೌಡ, ಹಲ್ಲೆ ನಡೆಸಿದ ಆರೋಪಿ ಮಣಿಕಂಠ ಗೌಡ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ಅಂಕೋಲಾದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಗಂಗಾಧರ ಪ್ರತಿದಿನ ಸಂಜೆ ಕೆಲಸಕ್ಕೆ ಬರುವಾಗ ಮತ್ತು ಮನೆಗೆ ತೆರಳುವಾಗ ಪರಿಚಿತರ ಬೈಕ್ ಇಲ್ಲವೇ ರಿಕ್ಷಾ ಮೂಲಕ ಸಂಚರಿಸುತ್ತಿದ್ದರು. ಮಾರ್ಚ 10 ರಂದು ಕೆಲಸ ಮುಗಿಸಿ ಮನೆಗೆ ತೆರಳಲು ರಾತ್ರಿ 8.30ಗಂಟೆಗೆ ತೆಂಕಣಕೇರಿ ಬಳಿ ಸಾಗುತ್ತಿದ್ದರು. ಇದೇ ವೇಳೆ ಅದೇ ಮಾರ್ಗವಾಗಿ ಬೈಕ್ ನಲ್ಲಿ ಬಂದ ಕೆಳಗಿನ ಮಂಜಗುಣಿಯ ಮಣಿಕಂಠ ಗೌಡನ ಬಳಿ ಬಾಸಗೋಡ ಸಮೀಪ ಬಿಡುವಂತೆ ಕೇಳಿ ಗಂಗಾಧರ ಬೈಕ್ ಏರಿದ್ದಾರೆ.
ನಂತರ ಮಣಿಕಂಠ, ತನ್ನ ತಮ್ಮನ ಬಳಿ ಯಾಕೆ ಜಗಳ ಮಾಡಿದ್ದು? ಎಂದು ಪ್ರಶ್ನಿಸಿ ಗಂಗಾಧರ ಗೌಡರೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ವಾಗ್ವಾದ ನಡೆಸುತ್ತಾ ಬಾಸಗೋಡನಲ್ಲಿ ಬೈಕ್ ನಿಲ್ಲಿಸದೇ ಕೆಳಗಿನ ಮಂಜಗುಣಿಯ ಸಮುದ್ರ ದಂಡೆಗೆ ಕರೆದೊಯ್ದು ಬೈಕ್ ನಿಲ್ಲಿಸಿ ರಾತ್ರಿ 9.30ಗಂಟೆಗೆ ಅವ್ಯಾಚ್ಯವಾಗಿ ಬೈದು ಸಾಯಿಸುವುದಾಗಿ ಬೆದರಿಸಿದ್ದಾನೆ. ಚಾಕುವಿನಿಂದ 2-3 ಬಾರಿ ಕುತ್ತಿಗೆಗೆ ಹಲ್ಲೆ ಮಾಡಿ ಗಂಗಾಧರ ಗೌಡರನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪಿಎಸ್ಐ ಉದ್ದಪ್ಪ ಧರೆಪ್ಪನವರ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಕುರಿತಂತೆ ಸ್ಪಷ್ಟ ಮಾಹಿತಿ ಇಲ್ಲದ್ದರಿಂದ ಅಪರಿಚಿತರು ಹಲ್ಲೆ ಮಾಡಿದ್ದಾರೆ ಅಥವಾ ದರೋಡೆ ಮತ್ತಿತರ ಕಾರಣದಿಂದ ಹಲ್ಲೆ ನಡೆದಿರಬಹುದು ಎಂದು ಸುದ್ದಿ ಹರಿದಾಡುತ್ತಿದ್ದದ್ದು ಕಂಡು ಬಂತು.