BJP And JDS seat-sharing in Karnataka: ಟಿಕೆಟ್ ಹಂಚಿಕೆ ಮಧ್ಯೆದಲ್ಲೇ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಸೀಟು ಹಂಚಿಕೆಯಾಗಿದೆ. ಬಿಜೆಪಿ ಹೈಕಮಾಂಡ್, ಜೆಡಿಎಸ್ಗೆ ರಾಜ್ಯದಲ್ಲಿ ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಈ ಬಗ್ಗೆ ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ. ಆ ಮೂರು ಕ್ಷೇತ್ರಗಳು ಯಾವುವು ಎನ್ನುವುದನ್ನು ಸಹ ಹೇಳಿದ್ದಾರೆ. ಈ ಮೂಲಕ ಓರ್ವ ಹಾಲಿ ಬಿಜೆಪಿ ಸಂಸದ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಶ್ಗೆ ನಿರಾಸೆಯಾಗಿದೆ.
ಹಾಸನ, ಮಾರ್ಚ್ 13 : ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿ (BJP) ಹೈಕಮಾಂಡ್ ಮಟ್ಟದಲ್ಲಿ ಟಿಕೆಟ್ ಹಂಚಿಕೆಯ ಸರ್ಕಸ್ ಜೋರಾಗಿದೆ. ಇತ್ತ ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಸೀಟು ಹಂಚಿಕೆ ಫೈನಲ್ ಆಗಿದ್ದು, ಬಿಜೆಪಿ ಹೈಕಮಾಂಡ್, ಜೆಡಿಎಸ್ಗೆ ಮೂರು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಈ ಬಗ್ಗೆ ಸ್ವತಃ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ. ಹಾಸನದಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಲೋಕಸಭಾ ಚುನಾವಣೆ, ಜೆಡಿಎಸ್ ಪಕ್ಷದ ಸ್ಥಿತಿಗತಿ, ದೇವೇಗೌಡ ಮತ್ತು ತಮ್ಮ ಆರೋಗ್ಯ ಸೇರಿದಂತೆ ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದರು. ಇದೇ ವೇಳೆ ಜೆಡಿಎಸ್ ಪಾಲಿಗೆ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರ ಸಿಕ್ಕಿದೆ ಎಂದು ಬಹಿರಂಗಪಡಿಸಿದರು.
ಹಾಸನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಅಷ್ಟಬೇಗ ಸಾಯಲ್ಲ ನಿಮ್ಮ ಜೊತೆ ಇರುತ್ತೇನೆ. ಭಗವಂತ ನನಗೆ ಅಯಸ್ಸು ಕೊಡುತ್ತಾನೆ. ಜೆಡಿಎಸ್ ಪಕ್ಷ ಉಳಿಸಿ ಎಂದು ಭಾವುಕರಾದ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಾರೆ. ಪ್ರಜ್ವಲ್ ಅಭ್ಯರ್ಥಿ ಅಲ್ಲ ಕುಮಾರಸ್ವಾಮಿ ಅಂದುಕೊಳ್ಳಿ. ಕುಮಾರಸ್ವಾಮಿ ಅಭ್ಯರ್ಥಿ ಎಂದು ತಿಳಿದು ಮತಹಾಕಿ ಎಂದು ಹೇಳಿದರು. ಈ ಮೂಲಕ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆಯನ್ನು ಖಚಿತಪಡಿಸಿದರು.
ಸುಮಲತಾ, ಮುನಿಸ್ವಾಮಿಗೆ ಶಾಕ್
ಜೆಡಿಎಸ್ ಕನಿಷ್ಠ ಐದು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಆದ್ರೆ, ಬಿಜೆಪಿ ಹೈಕಮಾಂಡ್ ಅಳೆದುತೂಗಿ ಅಂತಿಮವಾಗಿ ಜೆಡಿಎಸ್ಗೆ ನಿರೀಕ್ಷೆಯಂತೆ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಹಾಸನದಲ್ಲಿ ಈಗಾಗಲೇ ಜೆಡಿಎಸ್ನ ಪ್ರಜ್ವಲ್ ರೇವಣ್ಣ ಸಂಸದರಿದ್ದು, ಈ ಬಾರಿ ಅವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಇನ್ನು ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯವನ್ನು ಪಡೆದುಕೊಳ್ಳುವಲ್ಲಿ ದಳಪತಿಗಳು ಯಶಸ್ವಿಯಾಗಿದೆ. ಬಿಜೆಪಿ ಹಾಲಿ ಸಂಸದ ಇರುವ ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿಗೆ ಈ ಬಾರಿ ಟಿಕೆಟ್ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಇನ್ನು ಮಂಡ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಶ್ಗೆ ನಿರಾಸೆಯಾಗಿದ್ದು, ಅವರು ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು?
ಜೆಡಿಎಸ್ ಮಂಡ್ಯ ಕ್ಷೇತ್ರದಿಂದ ಸಿಎಸ್ ಪುಟ್ಟರಾಜು ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಖುದ್ದು ಕುಮಾರಸ್ವಾಮಿ ಸ್ಪರ್ಧಿಸುವಂತೆ ಬಿಜೆಪಿ ಹೈಕಮಾಂಡ್ ಹೇಳಿತ್ತು. ಆದ್ರೆ, ಎಚ್ಡಿಕೆ ಪುಟ್ಟರಾಜು ಅವರನ್ನ ಅಂತಿಮಗೊಳಿಸಿದ್ದಾರೆ. ಇನ್ನು ಹಾಸನದಲ್ಲಿ ನಿರೀಕ್ಷೆಯಂತೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಪಕ್ಕಾ ಆಗಿದೆ. ಆದ್ರೆ, ಕೋಲಾರದಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಶಾಸಕ ಸಮೃದ್ಧಿ ಮಂಜುನಾಥ್ ಅವರನ್ನು ಅಖಾಡಕ್ಕಿಳಿಸಲು ಜೆಡಿಎಸ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಮೂರು ಕ್ಷೇತ್ರಗಳು ಒಕ್ಕಲಿಗರ ಭದ್ರಕೋಟೆ
ಜೆಡಿಎಸ್ ಕೋಟಾದಲ್ಲಿ ಇರುವ ಈ ಮೂರು ಕ್ಷೇತ್ರಗಳು ಒಕ್ಕಲಿಗರ ಭದ್ರಕೋಟೆಗಳಾಗಿವೆ. ಒಕ್ಕಲಿಗರ ಮೇಲೆ ಜೆಡಿಎಸ್ಗೆ ಹಿಡಿತವಿದೆ. ಅಲ್ಲದೇ ಕುಮಾರಸ್ವಾಮಿ ಮತ್ತು ದೇವೇಗೌಡ ಒಕ್ಕಲಿಗ ಸಮುದಾಯದ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ. ಕಾಂಗ್ರೆಸ್ನಲ್ಲಿ ಡಿಕೆ ಶಿವಕುಮಾರ್ ಅವರು ಪ್ರಬಲ ಒಕ್ಕಲಿಗ ನಾಯಕ ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರು ತಮ್ಮ ಬೆಂಬಲವನ್ನು ವಿಭಜಿಸಿದ ಪರಿಣಾಮ ಜೆಡಿಎಸ್ ಮೇಲೆ ತೀವ್ರ ಪರಿಣಾಮ ಬೀರಿತ್ತು. ಈ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರು ಯಾವ ರೀತಿ ಮತ ಚಲಾಯಿಸುತ್ತಾರೆ ಎಂಬುವುದರ ಮೇಲೆ ಫಲಿತಾಂಶ ಅವಲಂಬಿತವಾಗಿರುತ್ತದೆ.