CM Siddaramaiah : ಅನಂತ ಕುಮಾರ್ ಆರೆಸ್ಸೆಸ್ ಬೆಂಬಲಿಗ. ಹೀಗಾಗಿ ಅವರು ಏನೇ ಹೇಳಿದರೂ ಕ್ರಮ ಕೈಗೊಳ್ಳುವ ತಾಕತ್ತು ಬಿಜೆಪಿಗೆ ಇಲ್ಲ. ಮಾತ್ರವಲ್ಲ ಅವರು ನರೇಂದ್ರ ಮೋದಿಯನ್ನೂ ಕೇರ್ ಮಾಡಲ್ಲ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಬೆಂಗಳೂರು ಮಾರ್ಚ್ 11 : ಬಿಜೆಪಿಗೆ ಕೇಂದ್ರದಲ್ಲಿ 400 ಸೀಟು ಬೇಕಾಗಿರುವುದು ಸಂವಿಧಾನ ಬದಲಾವಣೆಗೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಕಾರವಾದ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವ ದಮ್ಮು-ತಾಕತ್ತು ಬಿಜೆಪಿಗೆ ಇಲ್ಲ. ಯಾಕೆಂದರೆ ಅವರಿಗೆ ಆರೆಸ್ಸೆಸ್ ಬೆಂಬಲವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೆಗಡೆ ಈಗ ಹೇಳಿರುವುದನ್ನೇ ಹಿಂದೆ ಕಾಲಕಾಲಕ್ಕೆ ಆರ್.ಎಸ್.ಎಸ್ ನಾಯಕರು ಹೇಳಿದ್ದರು. ಹೆಗಡೆ ಒಂದು ಮುಖವಾಡ ಅಷ್ಟೆ, ನಿಜವಾದ ಮುಖ ಆರ್.ಎಸ್.ಎಸ್ ಎಂದಿರುವ ಅವರು, ಆರ್.ಎಸ್.ಎಸ್ ಬೆಂಬಲ ಇರುವುದರಿಂದ ಬಿಜೆಪಿಯನ್ನೇ ಯಾಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೆಗಡೆ ಅವರು ಲೆಕ್ಕಕ್ಕಿಟ್ಟಿಲ್ಲ ಎಂದು ನುಡಿದರು.
ಸಂಸದ ಅನಂತಕುಮಾರ ಹೆಗಡೆ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿರುವುದು ವೈಯಕ್ತಿಕ ಹೇಳಿಕೆ ಎಂದು ಭಾರತೀಯ ಜನತಾ ಪಕ್ಷ ತಳ್ಳಿಹಾಕಿರುವುದು ನಾಚಿಕೆಗೇಡಿನ ನಡೆಯ ಪ್ರತೀಕ ಮಾತ್ರವಲ್ಲ ನೆಲದ ಕಾನೂನಿನ ಬಗ್ಗೆ ಅವರಿಗಿರುವ ತಿರಸ್ಕಾರವೂ ಹೌದು.. ಈ ಹೇಳಿಕೆಯನ್ನು ಹೆಗಡೆ ತಮ್ಮ ಮನೆಯ ಅಡುಗೆಕೋಣೆಯಲ್ಲಿ ನೀಡಿದ್ದಲ್ಲ, ಸಾರ್ವಜನಿಕ ಸಮಾರಂಭದಲ್ಲಿ ಸಂಸದನಾಗಿ ಮಾತನಾಡಿರುವುದು. ಈ ವ್ಯತ್ಯಾಸ ತಿಳಿಯದಷ್ಟು ಬಿಜೆಪಿ ನಾಯಕರು ಮೂರ್ಖರಲ್ಲ, ಇವರಿಗೆ ಆರ್ ಎಸ್ ಎಸ್ ಬೆಂಬಲದ ಅನಂತಕುಮಾರ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ದಮ್ಮು ತಾಖತ್ ಇಲ್ಲ ಅಷ್ಟೆ.
ನರೇಂದ್ರ ಮೋದಿಯವರೂ ಸೇರಿದಂತೆ ಬಿಜೆಪಿ ನಾಯಕರ ಮುಂದೆ ಈಗ ಇರುವುದು ಎರಡೇ ಆಯ್ಕೆ. ಒಂದೋ ಹೆಗಡೆಯನ್ನು ತಕ್ಷಣ ಪಕ್ಷದಿಂದ ವಜಾಗೊಳಿಸಬೇಕು ಇಲ್ಲವೇ ಅವರ ಹೇಳಿಕೆಗೆ ತಮ್ಮ ಸಹಮತ ಇದೆ ಎಂದು ಘೋಷಿಸಬೇಕು. ನೋಡೋಣ ಇದೇ ವಿಷಯದ ಮೇಲೆ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಲಿ ಎಂದು ಹೇಳಿದರು.