ಅಂಕೋಲಾ ಕಲ್ಲೇಶ್ವರದಲ್ಲಿ ಹರಿಯುವ ನೀರಿಗಾಗಿ ಹಲ್ಲೆ

ಅಂಕೋಲಾ ಮಾರ್ಚ್‌ 11 : ಹಳ್ಳದ ಕಾಲುವೆ ನೀರನ್ನು ತೋಟದ ಜಮೀನಿಗೆ ಹಾಯಿಸುವ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದು ವ್ಯಕ್ತಿಯೋರ್ವರ ಮೇಲೆ ಗುದ್ದಲಿಯಿಂದ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಕಲ್ಲೇಶ್ವರ ಗ್ರಾಮದಲ್ಲಿ ನಡೆದಿದೆ.

ಹಲ್ಲೆ ನಡೆಸಿದ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಲ್ಲೇಶ್ವರದ ಚಂದ್ರಶೇಖರ ತಿಮ್ಮಣ್ಣ ಹೆಗಡೆ (53) ದೂರು ದಾಖಲಿಸಿದ್ದು, ಅದೇ ಗ್ರಾಮದ ಮಹೇಂದ್ರ ಗಣಪತಿ ಭಟ್ (42) ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.
ಕಾಲುವೆ ನೀರಿನ ವಿಚಾರವಾಗಿ ಇಬ್ಬರ ನಡುವೆ ತಂಟೆ ತಕರಾರು ನಡೆದಿದ್ದು ಆರೋಪಿ ಮಹೇಂದ್ರ ಭಟ್ ಈ ಹಿಂದೆ ಕೊಲೆ ಬೆದರಿಕೆಯನ್ನು ಹಾಕಿದ್ದಾರೆ. ಶನಿವಾರ ರಾತ್ರಿ ಚಂದ್ರಶೇಖರ ಹೆಗಡೆ ತಮ್ಮ ತೋಟಕ್ಕೆ ಹಳ್ಳದ ಕಾಲುವೆ ನೀರು ಹಾಯಿಸಲು ಹೋದಾಗ, ಆಪಾದಿತ ಮಹೇಂದ್ರ ಅಡ್ಡಗಟ್ಟಿ ಗುದ್ದಲಿಯನ್ನು ಕಸಿದುಕೊಂಡು ತಲೆ, ಕಾಲು, ಬೆನ್ನಿನ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನೊಮ್ಮೆ ನೀರನ್ನು ಬಳಸಲು ಬಂದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.