ಅಂಕೋಲಾ: ಜಿಲ್ಲಾ ಕಾಂಗ್ರೆಸ್ ಅಡಿಯಲ್ಲಿ ಮೀನುಗಾರಿಕಾ ಘಟಕದ ಸಮಿತಿಯನ್ನು ಪುನರ್ ರಚನೆ ಮಾಡಿ ತಾಲ್ಲೂಕು ಘಟಕಗಳ ಅಧ್ಯಕ್ಷರನ್ನು ನೇಮಕ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಮೀನುಗಾರ ಘಟಕದ ಅಧ್ಯಕ್ಷರು ಸಮಿತಿಯ ಇತರೆ ಪದಾಧಿಕಾರಿಗಳು ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಪಕ್ಷದ ಹಿತದೃಷ್ಟಿಯಿಂದ ಹಾಗೂ ಮೀನುಗಾರರ ಅಭಿವೃದ್ಧಿಯ ಸಲುವಾಗಿ ಸಮಿತಿ ರಚನೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪ್ರಮುಖರಾದ ಅರವಿಂದ ಕುಡ್ತಾಳಕರ ಮತ್ತು ಸಂತೋಷ್ ಖಾರ್ವಿ ಮನವಿ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.