ವರದಿ : ಸಂದೇಶ್.ಎಸ್.ಜೈನ್
ಜೋಯಿಡಾ : ಕನ್ನಡದ ನೆಲದಲ್ಲಿ ಹುಟ್ಟಿ, ಕನ್ನಡ ಶಾಲೆಯಲ್ಲಿ ಕಲಿತು, ಕನ್ನಡದ ನೆಲದಲ್ಲೆ ಸರಕಾರಿ ನೌಕರಿಯನ್ನು ಗಿಟ್ಟಿಸಿಕೊಂಡು, ಕೈ ತುಂಬ ಸಂಬಳ ಇದ್ದರೂ, ಕನ್ನಡವನ್ನು ನಿರ್ಲಕ್ಷಿಸುತ್ತಿರುವ ಈ ಅಧಿಕಾರಿಗಳು ಕನ್ನಡ ನಾಡಿನ ಅಧಿಕಾರಿಗಳೇ ಎಂಬ ಅನುಮಾನ ಜೋಯಿಡಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳ ಮೇಲೆ ಬಲವಾಗಿ ಮೂಡತೊಡಗಿದೆ.
ಇಚ್ಛಾಶಕ್ತಿಯೇ ಇಲ್ಲದಿರುವ ಇಂತಹ ಅಧಿಕಾರಿಗಳು ತಾಲೂಕಿಗೆ ಬೇಕೆ ಎನ್ನುವ ಪ್ರಶ್ನೆ ಎದುರಾಗಿದೆ. ಅಂದಹಾಗೆ ಗಡಿ ತಾಲೂಕಾಗಿರುವ ಜೋಯಿಡಾದ ತಾಲೂಕು ಕೇಂದ್ರದಲ್ಲಿರುವ ಕನ್ನಡ ಭವನವನ್ನು ನವೀಕರಣ ಮಾಡಿಕೊಡುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆಯವರು ಶಾಸಕ ಆರ್.ವಿ.ದೇಶಪಾಂಡೆಯವರಿಗೆ ಮನವಿಯನ್ನು ಮಾಡಿದ್ದರು. ಇತ್ತ ಕನ್ನಡಪರ ಸಂಘಟನೆಗಳು ಕೂಡ ಮನವಿಯನ್ನು ಮಾಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಬಿ.ಎನ್.ವಾಸರೆಯವರ ಮನವಿಗೆ ಸಕಾಲಿಕವಾಗಿ ಸ್ಪಂದಿಸಿದ ಶಾಸಕರಾದ ಆರ್.ವಿ.ದೇಶಪಾಂಡೆ ಅವರು ತಡವರಿಯದೆ ಜೋಯಿಡಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಮೂಲಕ ಕನ್ನಡ ಭವನದ ನವೀಕರಣ ಕಾಮಗಾರಿಗಾಗಿ ಏಳು ಲಕ್ಷ ರೂಪಾಯಿಯನ್ನು ಮಂಜೂರು ಮಾಡಿಸಿದ್ದರು.
ಈ ಹಣ ಮಂಜೂರುಗೊಂಡು ಮತ್ತು ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆಯಾಗಿ ವರ್ಷ ಒಂದು ಕಳೆದರೂ, ಜೋಯಿಡಾದ ಘನತವೆತ್ತ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲ ಎಂಬಂತೆ ಇದ್ದ ಪರಿಣಾಮವಾಗಿ ಈವರೆಗೆ ಕನ್ನಡ ಭವನದ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ.
ಈ ಬಗ್ಗೆ ಕೆ ಡಿ ಪಿ ಸಭೆಯಲ್ಲಿಯೂ ಆರ್.ವಿ. ದೇಶಪಾಂಡೆಯವರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಆರ್.ವಿ.ದೇಶಪಾಂಡೆ ಅವರ ಮಾತಿಗೆ ತಲೆಬಾಗಿನಿಂತ ಅಧಿಕಾರಿಗಳು, ಆ ಬಳಿಕವಾದರೂ ಕಾಮಗಾರಿಯನ್ನು ಮಾತ್ರ ಪ್ರಾರಂಭಿಸಿಯೇ ಇಲ್ಲ. ಒಂಬತ್ತು ಬಾರಿ ಶಾಸಕರಾಗಿ ರಾಜ್ಯದ ಮುತ್ಸದಿ ನಾಯಕರಾದ ಆರ್.ವಿ.ದೇಶಪಾಂಡೆಯವರ ಮಾತಿಗೆ ರಾಜ್ಯಮಟ್ಟದ ಅಧಿಕಾರಿಗಳು ತಕ್ಷಣವೇ ಸ್ಪಂದಿಸುತ್ತಿರುವ ಇಂತಹ ಸಂದರ್ಭದಲ್ಲಿ ತಾಲೂಕು ಮಟ್ಟದಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮಾತ್ರ ಸ್ಪಂದಿಸದಿರುವುದನ್ನು ನೋಡಿದರೆ ಈ ಅಧಿಕಾರಿಗಳ ಅಹಂಕಾರಕ್ಕೆ ಬಲವಾದ ಸಾಕ್ಷಿ ಇನ್ನೊಂದು ಬೇಕೆ ಎಂಬ ಪ್ರಶ್ನೆ ತಾಲೂಕಿನಲ್ಲಿ ಚರ್ಚೆಯಲ್ಲಿದೆ.
ಹಲವು ವರ್ಷಗಳಿಂದ ಇಲ್ಲೇ ಬೀಡು ಬಿಟ್ಟ ಈ ಅಧಿಕಾರಿಗಳಿಗೆ ಯಾರ ಭಯವು ಇಲ್ಲವಾಗಿದೆ. ಈಗ ಆರ್.ವಿ.ದೇಶಪಾಂಡೆ ಅವರು ಯೋಚನೆ ಮಾಡಬೇಕಾದ ಸಮಯ ಬಂದೊದಗಿದೆ. ಜೋಯಿಡಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಕೂಡಲೇ ಎತ್ತಂಗಡಿ ಮಾಡಿ ಈ ಇಲಾಖೆಯ ಘನತೆಯನ್ನು ಎತ್ತಿ ಹಿಡಿಯಬೇಕಾಗಿದೆ. ಇಲ್ಲದೆ ಹೋದರೆ ತಾಲೂಕಿನ ಅಭಿವೃದ್ಧಿಗೆ ಪಂಚಾಯ್ತು ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳು ವಿಷಸರ್ಪಗಳಾಗುವುದು ಬಹುತೇಕ ಖಚಿತ. ಈ ನಿಟ್ಟಿನಲ್ಲಿ ವಿಷಸರ್ಪಗಳನ್ನು ತಾಲೂಕಿನಿಂದ ಹೊರಗಡೆ ಕಳುಹಿಸಿ, ನಿಷ್ಠಾವಂತ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ಈ ಇಲಾಖೆಗೆ ತರಬೇಕಾದ ಸಂಕಲ್ಪವನ್ನು ಶಾಸಕರು ಮಾಡಲೇ ಬೇಕಾಗಿದೆ.
ಕನ್ನಡ ಭವನದ ನವೀಕರಣ ಕಾಮಗಾರಿಯನ್ನು ಈ ಕೂಡಲೇ ಪ್ರಾರಂಭಿಸಬೇಕೆಂದು ಜೋಯಿಡಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪಾಂಡುರಂಗ ಪಟಗಾರ ಅವರು ಮೂಲಕ ಮನವಿ ಮಾಡಿದ್ದಾರೆ.