ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಹಾಲಿ ಸಂಸದೆ, ಕೇಂದ್ರ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆ ಅವರಿಗೆ ಮತ್ತೆ ಟಿಕೆಟ್ ಸಿಗುವ ಎಲ್ಲಾ ಸಾಧ್ಯೆತಗಳಿವೆ. ಈ ಸಲ ಸಹ ಶೋಭಾ ಕರಂದ್ಲಾಜೆ ಸ್ಪರ್ಧೆ ಮಾಡುತ್ತಾರೆ ಹೆಚ್ಚಿನ ಅಂತರದಿಂದ ಗಲ್ಲಲಿದ್ದಾರೆ ಎಂದು ಈಗಾಗಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾಗಿದೆ. ಇದರ ಮಧ್ಯೆ ಟಿಕೆಟ್ ಆಕಾಂಕ್ಷಿಯಾಗಿರುವ ಸಿಟಿ ರವಿ ಅವರು ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕಮಗಳೂರು, (ಮಾರ್ಚ್ 07): ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ(Udupi-Chikkamagaluru) ಟಿಕೆಟ್ ವಿಚಾರ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಮೂಲಗಳ ಪ್ರಕಾರ ಈ ಬಾರಿಯೂ ಹಾಲಿ ಸಂಸದೆ, ಕೇಂದ್ರ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆ (Shobha karandlaje) ಅವರಿಗೆ ಟಿಕೆಟ್ ಫಿಕ್ಸ್ ಎನ್ನಾಗಿದೆ. ಇದರಿಂದ ನಿರಾಸೆಗೊಂಡಿರುವ ಸಿಟಿ ರವಿ (CT Ravi) ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ಹಿತಕ್ಕಾಗಿ ಮೋದಿ 3ನೇ ಬಾರಿ ಪ್ರಧಾನಿ ಆಗಬೇಕು ಅಷ್ಟೇ. ಪಕ್ಷ-ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನ ನುಂಗಿಕೊಂಡಿದ್ದೇನೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಬಿಜೆಪಿಯ ಶಿಸ್ತಿನ ಸಿಪಾಯಿ ಎನ್ನಿಸಿಕೊಂಡಿರುವ ಸಿಟಿ ರವಿ ಅವರು ಇದೇ ಮೊದಲ ಬಾರಿಗೆ ಪಕ್ಷದೊಳಗಿನ ಬೆಳವಣಿಗೆಗಳಿಂದ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ, ಮನದಲ್ಲಿ ಬಹಳ ಭಾವನೆಗಳಿವೆ, ಹೇಳುವುದಕ್ಕೆ ಬಹಳ ಇದೆ. ಸಮಯ ಇದಲ್ಲ. ಸದ್ಯಕ್ಕೆ ರಾಷ್ಟ್ರದ ಹಿತಕ್ಕಾಗಿ ಮೋದಿ 3ನೇ ಬಾರಿ ಪ್ರಧಾನಿ ಆಗಬೇಕು ಅಷ್ಟೇ. ಪಕ್ಷ-ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನ ನುಂಗಿಕೊಂಡಿದ್ದೇನೆ. ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗಲ್ಲ, ಸಮಯ ಬರಲಿ ಎಲ್ಲಾ ಹೇಳುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿಯೊಳಗಿನ ಬೆಳವಣಿಗೆಗಳಿಂದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡುವುದಾದರೆ ಲೋಕಸಭಾ ಚುನಾವಣೆ ನಂತರವೆ. ವಿಧಾನಸಭೆ ಚುನಾವಣೆಯಲ್ಲಿ ಯಾರ್ಯಾರು ಹೇಗೆ ನಡೆದುಕೊಂಡ್ರು ಎನ್ನುವುದನ್ನು ಲೋಕಸಭೆ ಚುಣಾವಣೆ ಬಳಿಕ ಹೇಳುತ್ತೇನೆ, ಹೇಳಲೇಬೇಕು. ಲೋಕಸಭಾ ಚುನಾವಣೆ ಬಳಿಕ ಬಹಳ ವಿಷಯ ಹೇಳಲು ಇದೆ ಅದೆಲ್ಲವನ್ನೂ ಹೇಳುತ್ತೇನೆ. ಈಗ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅದೊಂದೆ ಗುರಿ ಇರುವುದು. ರಾಜ್ಯದ 28 ಸ್ಥಾನವನ್ನೂ ಬಿಜೆಪಿ ಗೆಲ್ಲಬೇಕು, ಅದಕ್ಕೆ ಅಳಿಲು ಸೇವೆ ಮಾಡುವುದಷ್ಟೇ ನಮ್ಮ ಕೆಲಸ ಎಂದು ಮಾರ್ಮಿಕವಾಗಿ ಹೇಳಿದರು. ಈ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸಾಬೀತಾದಂತಾಗಿದೆ.
ಸಿಟಿ ರವಿ ಅಸಮಾಧಾನಕ್ಕೆ ಕಾರಣವೇನು?
ಇನ್ನು ಸಿಟಿ ರವಿ ಅವರ ಮಾತುಗಳನ್ನು ಗಮನಿಸಿದರೆ ರಾಜ್ಯ ಬಿಜೆಪಿಯೊಳಗಿನ ಕೆಲ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಟಿ ರವಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಚರ್ಚೆಗಳು ನಡೆದಿದ್ದವು. ಇದಕ್ಕೆ ಪೂರಕವೆಂಬಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ನಡೆದ ಕೆಲ ರಾಜಕೀಯ ಬೆಳವಣಿಗೆಗಳಿಂದ ಸಿಟಿ ರವಿ ಬದಲಾಗಿ ಬಿವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಯ್ತು ಎನ್ನಲಾಗಿದೆ.
ಇದೀಗ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಸಿಟಿ ರವಿ ಆಸೆ ಇಟ್ಟುಕೊಂಡಿದ್ದರು. ಆದ್ರೆ ಬಿಎಸ್ ಯಡಿಯೂರಪ್ಪ ಮತ್ತೆ ಶೋಭಾ ಕರಂದ್ಲಾಜೆ ಪರ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿಯಾಗಿದ್ದ ತಮಗೆ ರಾಜ್ಯ ಘಟಕದಲ್ಲಿ ಯಾವುದೇ ಜವಾಬ್ದಾರಿ ನೀಡದಿದ್ದರಿಂದ ಸಿಟಿ ರವಿ ಅವರ ಅಸಮಾಧಾನಕ್ಕೆ ಕಾರಣ ಇರಬಹುದು.
ಒಟ್ಟಿನಲ್ಲಿ ಸಿಟಿ ರವಿ ಅವರು ರಾಜ್ಯ ಬಿಜೆಪಿಯೊಳಗಿನ ಕೆಲ ಬೆಳವಣಿಗೆಯಿಂದಾಗಿ ಅಸಮಾಧಾನಗೊಂಡಿದ್ದು, ಲೋಕಸಭಾ ಚುನಾವಣೆ ಬಳಿಕ ಏನೆಲ್ಲಾ ಹೇಳಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.