ಭೀಕರ ಬರಗಾಲ, 800ಕ್ಕೂ ಹೆಚ್ಚು ರೈತರ ಆತ್ಮಹತ್ಯೆ : ಬಿವೈ ವಿಜಯೇಂದ್ರ ಆಕ್ರೋಶ

BY Vijayendra : ರಾಜ್ಯ ಸರ್ಕಾರ ಬರಗಾಲ ನಿರ್ವಹಣೆಯಲ್ಲಿ ಸೋತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರು ಮಾರ್ಚ್‌ 9 : ರಾಜ್ಯದಲ್ಲಿ ಭೀಕರ ಕ್ಷಾಮದ (Severe Drought) ಪರಿಸ್ಥಿತಿ ಎದುರಾಗಿದೆ. ಬರಗಾಲ ನಿರ್ವಹಿಸುವಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ (Congress Government Failed) ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಅವರು ಟೀಕಿಸಿದ್ದಾರೆ. ನಗರದ ಮಲ್ಲೇಶ್ವರದ ಮಲ್ಲೇಶ್ವರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಶನಿವಾರ ಅವರು ವಿಕಸಿತ ಭಾರತ (Viksit Bharath) ಎಲ್.ಇ.ಡಿ ಪ್ರಚಾರ ವಾಹನಗಳ ಉದ್ಘಾಟನೆ (LED Campaign Vehicle) ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಭೀಕರ ಬರಗಾಲ ಇದೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬರದ ಸಮಸ್ಯೆಯಿಂದ ಕುಡಿಯುವ ನೀರಿಗೂ ಹಾಹಾಕಾರ ಇದೆ. ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.

ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರಿಗೆ ಸೂಚನೆ
ಕಾಳಜಿ ಇಲ್ಲದ ಸರಕಾರ ಇದು. ದರಿದ್ರ ಸರಕಾರ ಇದೆಂದು ಸಾಮಾನ್ಯ ಜನರು ಹೇಳುತ್ತಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಗರ ಜಿಲ್ಲಾಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ವಿಜಯೇಂದ್ರ ತಿಳಿಸಿದರು. ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿದ್ದಾರೆ. ಬೆಂಗಳೂರಿನ ನೀರಿನ ಸಮಸ್ಯೆಯತ್ತ ಗಮನ ಕೊಡುತ್ತಿಲ್ಲ. ಕುಡಿಯುವ ನೀರಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ಇದು ದೇಶದ ಭವಿಷ್ಯ ರೂಪಿಸುವ ಚುನಾವಣೆ. ರಾಜ್ಯದಲ್ಲಿ 28 ಕ್ಷೇತ್ರದಲ್ಲೂ ಬಿಜೆಪಿ- ಜೆಡಿಎಸ್ ಗೆಲ್ಲಿಸಲು ಪ್ರಜ್ಞಾವಂತ ಜನರು ನಿರ್ಧರಿಸಿದ್ದಾರೆ. ಸಾಮಾನ್ಯ ಜನರ ಅಭಿಪ್ರಾಯ, ವಿವಿಧ ಕ್ಷೇತ್ರಗಳ ಜನರ ಅಭಿಮತ ಪಡೆದು ಸಂಕಲ್ಪ ಪತ್ರ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ವಿಜಯೇಂದ್ರ ವಿವರಿಸಿದರು.

ವಾಹನ ಬಂದಾಗ ಸಲಹೆ ಕೊಡಿ ಎಂದ ವಿಜಯೇಂದ್ರ
ವಿಕಸಿತ ಭಾರತ ಎಲ್.ಇ.ಡಿ ಪ್ರಚಾರ ವಾಹನಗಳ ಸಂಚಾರದ ಉದ್ದೇಶ ಸರಕಾರದ ಸಾಧನೆ ತಿಳಿಸುವುದು ಮಾತ್ರವಲ್ಲದೆ ಜನರಿಗೆ ಸಲಹೆ ಪಡೆಯುವುದು ಕೂಡಾ ಆಗಿದೆ. ಸಲಹಾ ಪೆಟ್ಟಿಗೆಯೊಂದಿಗೆ ಈ ವಾಹನ ತೆರಳಲಿದೆ. ಜನರ ಅಭಿಪ್ರಾಯ ಪಡೆಯುವುದು ಮತ್ತು ಅದನ್ನು ಅನುಷ್ಠಾನಕ್ಕೆ ತರಲು ಶ್ರಮಿಸುವುದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ನುಡಿದರು.