ವೃಕ್ಷಮಾತೆಯ ತವರಿನಲ್ಲೇ ಕಿಂಡಿ ಆಣೆಕಟ್ಟೆಗಾಗಿ ಬೃಹತ್ ಮರಗಳ ಮಾರಣ ಹೋಮ

ಅಂಕೋಲಾ, ಮಾರ್ಚ್‌ 12 : ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡರ ಊರಿನಲ್ಲಿ ಅವರ ಮನೆಯ ಹತ್ತಿರದಲ್ಲೇ ಕಿಂಡಿ ಆಣೆಕಟ್ಟೆ ನಿರ್ಮಾಣದ ನೆಪದಲ್ಲಿ 250 ಕ್ಕೂ ಹೆಚ್ಚು ಬೃಹತ್ ಮರಗಳನ್ನು ಕಡಿದುರುಳಿಸಿರುವದನ್ನು ಪದ್ಮಶ್ರೀ ತುಳಸೀ ಗೌಡ ತೀವೃವಾಗಿ ಖಂಡಿಸಿದ್ದಾರೆ. ಅಲ್ಲದೆ ಮತ್ತೆ ಮರಗಳಿಗೆ ಕೊಡಲಿ ಇಟ್ಟರೆ ಉಗ್ರ ಪ್ರತಿಭಟನೆ ಮಾಡುವದಾಗಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ಅವರ ಮನೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ಹೊನ್ನಳ್ಳಿಯಲ್ಲಿ‌ ಕುಡಿಯುವ ನೀರಿನ ಯೋಜನೆಗೆ ನನ್ನ ತಕರಾರಿಲ್ಲ. ಆದರೆ ಆಣೆಕಟ್ಟಿನಿಂದ ಊರು ಮುಳುಗಡೆಯಾಗುವದಾದರೆ ಈ ಯೋಜನೆ ಬೇಡವೇ ಬೇಡ. ಪರಿಸರಕ್ಕೆ ಮಾರಕವಾಗುವ ಯಾವ ಯೋಜನೆಗೂ ನನ್ನ ವಿರೋಧವಿದೆ. ಈ ಭಾಗದಲ್ಲಿ ಮರಗಳನ್ನು ಕಡಿಯಬಾರದೆಂದು ಮನವಿ ಸಲ್ಲಿಸಿದ್ದೆ. ಪ್ರಧಾನ ಮಂತ್ರಿಗಳಿಗೂ ಮನವಿ ಸಲ್ಲಿಸಿದ್ದೇನೆ ಆದರೆ ಏಕಾಏಕಿ ಬಂದು ಮರಗಳನ್ನು ಕಡಿದಿರುವದು ತುಂಬ ನೋವಾಗಿದೆ. ನನ್ನ ಮನವಿಗೂ ಅಪಮಾನ ಮಾಡಿದ್ದಾರೆ ಎಂದರು.


ಕಿಂಡಿ ಆಣೆಕಟ್ಟು ವಿರೋಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಸಂತೋಷ ಗೌಡ ಮಾತನಾಡಿ ಹೊನ್ನಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಮರಗಳನ್ನು ಕಡಿಯದಂತೆ ಅವರು ಈಗಾಗಲೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೂ ಕೂಡ ಪತ್ರ ಬರೆದಿದ್ದರು. ಆದರೆ ಏಕಾಏಕಿ ಬಂದು ಯಾರೂ ಇಲ್ಲದ ವೇಳೆಯಲ್ಲಿ 250 ಬೃಹತ್ ಪ್ರಮಾಣದ ಮರಗಳನ್ನು ಉರುಳಿಸಿರುವದು ವೃಕ್ಷಮಾತೆಗೂ ಪದ್ಮಶ್ರೀಗೂ ಮಾಡಿದ ಅಪಮಾನವಾಗಿದೆ. ಅಲ್ಲದೆ ಈಗಾಗಲೇ ನಂಬರ ಹಾಕಿದ 250 ಮರಗಳನ್ನು ಕಡಿದುರುಳಿಸಲಾಗಿದೆ ಇನ್ನೂ ಸಾವಿರಾರು ಮರಗಳಿಗೆ ನಂಬರ ಬರೆಯಲಾಗಿದೆ ಅಂದರೆ ಮುಂದಿನ ದಿನಗಳಲ್ಲಿ ಈ ಮರಗಳೂ ಉರುಳಲಿವೆ ಎನ್ನುವದು ಸ್ಪಷ್ಠವಾಗುತ್ತಿದೆ. ಈಗ ಪರಿಸರವಾದಿಗಳು ಎಲ್ಲಿದ್ದಾರೊ ಗೊತ್ತಿಲ್ಲ ಎಂದರು.

ಕಿಂಡಿ ಆಣೆಕಟ್ಟು ಯೋಜನೆಯ ನಿಖರವಾದ ಮಾಹಿತಿ ಯಾರ ಬಳಿಯೂ ಇಲ್ಲ. ಕೇವಲ 8.5 ಮೀ ಎತ್ತರದ ಆಣೆಕಟ್ಟು ನಿರ್ಮಾಣವಾಗಲಿದೆ ಎನ್ನುತ್ತಾರೆ ಆದರೆ ನದಿ ದಡದ‌ ತಗ್ಗು ಪ್ರದೇಶದ ಭೂಮಿಗಳನ್ನು ಬಿಟ್ಟು ದೂರದಲ್ಲಿರುವ ಎತ್ತರದ ಪ್ರದೇಶದ ಸರ್ವೇ ನಂಬರಗಳನ್ನು ಮುಳುಗಡೆ ಪ್ರದೇಶ ಎಂದು ತೋರಿಸಿರುವದು ಆಣೆಕಟ್ಟಿನ ಎತ್ತರದ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.


ಹಿಲ್ಲೂರು ವ್ಯಾಪ್ತಿಯ ರೈತ ಜಯಪ್ರಕಾಶ ಗೌಡ ಮಾತನಾಡಿ ನಮ್ಮ ಜಮೀನು ಯೋಜನಾ ಪ್ರದೇಶದಿಂದ ಬಹಳ ದೂರದಲ್ಲಿದೆ. ಪತ್ರಿಕೆಗಳಲ್ಲಿ ಬಂದ ಮಾಹಿತಿಯ ಪ್ರಕಾರ ಈ 6 ಸರ್ವೇ ನಂಬರಗಳ ಕೃಷಿ ಭೂಮಿ ಪೈಕಿ ಕೇವಲ 3 ಗುಂಟೆ ಕೃಷಿ ಭೂಮಿ ಮಾತ್ರ ಮುಳುಗಡೆಯಾಗುತ್ತದೆ ಇವುಗಳ ಸರ್ವೇ ಕಾರ್ಯ ನಡೆಸಲಾಗುತ್ತದೆ ಎಂದಿದ್ದಾರೆ. ಇದು ತೀರ ಹಾಸ್ಯಾಸ್ಪದವಾಗಿದೆ ಅಷ್ಟು ದೂರದಲ್ಲಿ ಕೇವಲ 3 ಗುಂಟೆ ಮಾತ್ರ ಮುಳುಗಲು ಹೇಗೆ ಸಾಧ್ಯ ಎಂದರು.

ಹೋರಾಟ ಸಮಿತಿಯ ಸದಸ್ಯ ಆನಂದ ಗೌಡ ಮಾತನಾಡಿ ಕುಡಿಯುವ ನೀರಿನ ಯೋಜನೆಗಾಗಿ ನಮ್ಮ ವಿರೋಧವಿಲ್ಲ ಆದರೆ ಆಣೆಕಟ್ಟೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಬಹಿರಂಗವಾಗುತ್ತಿಲ್ಲ. ಆಣೆಕಟ್ಟೆಯ ಎತ್ತರದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡಿ ಇಲ್ಲಿನ ಜನರ ದಾರಿ ತಪ್ಪಸುತ್ತಿದ್ದಾರೆ. ಎಲ್ಲವೂ ಗುಪ್ತವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ತುಳಸಿ ಗೌಡರ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡುತ್ತೇವೆ.
ನಾರಾಯಣ ಬೀರಾ ಗೌಡ ಮಾತನಾಡಿ ಕಿಂಡಿ ಆಣೆಕಟ್ಟು ವಿಷಯದಲ್ಲಿ ಇಲ್ಲಿನ ರೈತರ ವಿರೋಧ ಇದೆ. 2012 ರಿಂದಲೂ ಪ್ರತಿಭಟನೆ ನಡೆಸಿದ್ದೇವೆ. ಈ ಬಗ್ಗೆ ಹಲವಾರು ಸಭೆಗಳು ನಡೆದಿವೆಯಾದರೂ ಸಭೆಯಲ್ಲಿ ರೈತರ ಅಭಿಪ್ರಾಯಗಳಿಗೆ ಮನ್ನಣೆ ಇಲ್ಲ. ಸ್ಥಳೀಯ ರೈತರ ಮಾತಿಗೆ ಕ್ಯಾರೇ ಎನ್ನುತ್ತಿಲ್ಲ. ರೈತರ ಹೋರಾಟಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಸಕರೂ ಜೊತೆಯಾಗಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ದಿನೇಶ ಗೌಡ ಚಂದ್ರಹಾಸ ಗೌಡ ಇನ್ನಿತರರು ಉಪಸ್ಥಿತರಿದ್ದರು.

ಈ ನಡುವೆ ಸೋಮವಾರ ಬೆಳಿಗ್ಗೆ ಯೋಜನಾ ಪ್ರದೇಶದ ಸಮೀಪ ಇರುವ ಕೆಲವು ಖಾಸಗಿ ಏಜನ್ಸಿಯವರು ಅಲ್ಲಿನ ರೈತರ ಖಾಸಗಿ ಜಮೀನಿನಲ್ಲಿ ಸರ್ವೇ ಕಾರ್ಯ ನಡೆಸುತ್ತಿದ್ದರು. ಅಲ್ಲಿಗೆ ಗ್ರಾಮಸ್ತರು ಬರುತ್ತಿದ್ದಂತೆ ಸರ್ವೇ ಮಾಡುತ್ತಿದ್ದವರು ಪಲಾಯನ ಮಾಡಿದ್ದಾರೆ. ಹೀಗೆ ಕದ್ದು ಮುಚ್ಚಿ ಸರ್ವೇ ಮಾಡುವ ಉದ್ದೇಶವೇನಿದೆ ಎಂದು ಗ್ರಾಮಸ್ತರು ಪ್ರಶ್ನಿಸುತ್ತಿದ್ದಾರೆ. ಸರ್ವೇ ನಡೆಸುತ್ತಿದ್ದ ಇನ್ನೊಂದು ತಂಡ ನೀರಿನ ಲೆವೆಲ್ ಚೆಕ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಹಾಗಾದರೆ ಇಲ್ಲಿ ಎತ್ತರದ ಜಾಗದಲ್ಲಿ ಏಕೆ ಸರ್ವೆ ಮಾಡುತ್ತೀರಿ ಎಂದು ಕೇಳಿದಾಗ ತಮಗೆ ಗೊತ್ತಿಲ್ಲ ಮಾಡಿ ಅಂದಿದ್ದಾರೆ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇವೆಲ್ಲ ಯೋಜನೆಯ ಹಿಂದೆ ಏನೋ ಕರಾಮತ್ತಿದೆ ಎನ್ನುವದು ಗ್ರಾಮಸ್ತರ ವಾದವಾಗಿದೆ.

ಯೋಜನಾ ಪ್ರದೇಶದಲ್ಲಿ ಈಗಾಗಲೇ ನಂಬರ ಹಾಕಿರುವ 250 ಬೃಹತ್ ಮರಗಳನ್ನು ಕಡಿದುರುಳಿಸಲಾಗಿದೆ. ಇನ್ನು ನದಿ ತಟದ ನೂರಾರು ಮರಗಳಿಗೆ ನಂಬರಗಳನ್ನು ಹಾಕಲಾಗಿದೆ ಅಂದರೆ ಮುಂದೆಯೂ ಈ ಮರಗಳನ್ನೂ ಉರುಳಿಸುತ್ತಾರೆ ಎನ್ನವದು ಸ್ಪಷ್ಠವಾಗುತ್ತಿದೆ ಎನ್ನುತ್ತಾರೆ ಸಂತೋಷ ಗೌಡ.

“ನಾನೇ ನೆಟ್ಟು ಬೆಳೆಸಿದ ಮರಗಳು ನನಗೆ ಮಕ್ಕಳಿದ್ದಂತೆ. ನನ್ನೆದುರೇ ಮರಗಳು ಕಡಿದುರುಳಿದ್ದು ನೋಡಿದಾಗ ತುಂಬ ನೋವಾಗುತ್ತಿದೆ. ಪರಿಸರ ನಾಶವಾಗುವ ಇಂತಹ ಯೋಜನೆ ಬೇಡ.”
ತುಳಸಿ ಗೌಡ ಪದ್ಮಶ್ರೀ ಪುರಸ್ಕ್ರತರು ಹೊನ್ನಳ್ಳಿ.