ಹೊನ್ನಾವರ ಮಾರ್ಚ್ 13 : ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಕೋಳಿ ಅಂಕ, ಅಂದರ್-ಬಾಹರ್, ಕುಟಕುಟಿ ಮಂಡ ಅಕ್ರಮ ದಂದೆ ಬಿಂದಾಸ್ ಆಗಿ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸುತ್ತಿದೆ…
ಬಹುತೇಕ ಕಡೆ ಯಕ್ಷಗಾನ, ನಾಟಕ ನಡೆದ ಸನಿಹದ ಮರದ ತೋಪು, ಬಯಲುಗಳಲ್ಲಿ ಕುಟಕುಟಿ ಮಂಡ, ಇಸ್ಪಿಟ್ ಆಟ ನಡೆಯುತ್ತಿದೆ. ತಿಂಗಳ ಒಳಗಾಗಿ ನಾಲ್ಕೈದು ಬಾರಿ ಗ್ರಾಮೀಣ ಪ್ರದೇಶದಲ್ಲಿ ಕೋಳಿ ಅಂಕ ನಡೆದಿದೆ ಎನ್ನುವ ಮಾಹಿತಿ ಇದೆ. ಕರ್ಕಿ ಸಮೀಪದ ದಲ್ಲಿರುವ ಮೂಡಗಣಪತಿ ದೇವಸ್ಥಾನ ಪಕ್ಕದ ಗುಡ್ಡದ ಮೇಲೆ ನಡೆದ ಅಕ್ರಮ ಚಟುವಟಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಪೊಲೀಸ್ ಇಲಾಖೆ ಕಾರ್ಯ ವೈಖರಿ ಬಗ್ಗೆ ಅನುಮಾನ ಮೂಡಿಸುತ್ತಿದೆ. ಈ ಬಾರಿ ದಂದೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಗೂಗಲ್ ಫೇ, ಫೋನ್ ಫೇ ಮೂಲಕ ಹಣದ ವಹಿವಾಟು ನಡೆಯುತ್ತಿದೆ. ಕೋಳಿ ಪಡೆಗೆ ಪೆಂಡಾಲ್ ಹಾಕಿ ಸ್ಟೇಜ್ ಮಾಡಿ ಸಾರ್ವಜನಿಕ ಕಾರ್ಯಕ್ರಮದಂತೆ ನಡೆಯುತ್ತಿದೆ. ದ್ವನಿ ವರ್ಧಕ ಬಳಸುವುದು ಮಾತ್ರ ಬಾಕಿ ಇದೆ. ಈ ಅಕ್ರಮ ದಂದೆಯ ಸುಳಿಗೆ ಸಿಲುಕಿ ಹಲವು ಕುಟುಂಬಗಳು ಕಣ್ಣೀರು ಹಾಕುತ್ತಿವೆ. ತಕ್ಷಣ ಇಂತಹ ಕಾನೂನು ಬಾಹಿರ ಚಟುವಟಿಕೆಯ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ…
ಒಂದು ದಿನ ಕೋಳಿ ಅಂಕಕ್ಕೆ ಬರುವ ಕೋಳಿಗಳು ಅಂದಾಜು 300ಕ್ಕೂ ಹೆಚ್ಚಿರುತ್ತದೆ. ಇಸ್ಪೀಟ್, ಗುಡುಗುಡಿಯಿಂದ ದಿನಕ್ಕೆ 2 ರಿಂದ 3ಲಕ್ಷ ಕ್ಕೂ ಹೆಚ್ಚು ವ್ಯವಹಾರ ನಡೆಯುತ್ತಿದೆ ಎನ್ನಲಾಗುತ್ತಿದೆ. ಸತತ ಮೂರರಿಂದ ನಾಲ್ಕು ದಿನ ಕೆಲವು ಕಡೆ ನಡೆಯುತ್ತಿದೆ. ಕೋಳಿ ಪಡೆಗೆ ಬರುವವರು ಹುಂಜದ ಜತೆಗೆ ಹಣದ ಕಂತೆಯನ್ನೇ ಹೊತ್ತು ತರುತ್ತಾರೆ. ವಿವಿಧ ತಳಿಯ ಹುಂಜಗಳನ್ನು ಕಟ್ಟಿ ಸಾಕಲಾಗುತ್ತಿದೆ. ಬೆಟ್ಟಿಂಗ್‌ನಿಂದಾಗಿ ಹುಂಜದ ದರವೂ ಹೆಚ್ಚಾಗಿದೆ. ಎತ್ತರ, ಶೈಲಿ, ತೂಕವನ್ನು ಗಮನಿಸಿ ಮಾರಾಟ ಮಾಡಲಾಗುತ್ತಿದೆ. ಈ ದಂದೆಯಿಂದ ಕೆಲವು ಇಲಾಖೆಗೆ ಒಂದು ದಿನಕ್ಕೆ 60 ರಿಂದ 70 ಸಾವಿರ ಕಪ್ಪ ಕಾಣಿಕೆ ಸಂದಾಯವಾಗುತ್ತದೆ ಎನ್ನುವ ಮಾತು ಬಲ್ಲಮೂಲಗಳಿಂದ ಕೇಳಿ ಬಂದಿದೆ…
ಇತ್ತೀಚಿನ ಕೆಲವು ವರ್ಷಗಳಿಂದ ಕೋಳಿ ಪಡೆ, ಇಸ್ಪೀಟ್ ಮಂಡ, ಕುಟ ಕುಟಿ ನಡೆಯುತ್ತಿರಲಿಲ್ಲ. ಕೋಳಿ ಪಡೆ, ಇಸ್ಪೀಟ್ ಮಂಡ ಕದ್ದು ಮುಚ್ಚಿ ಅಲ್ಲಿ ಇಲ್ಲಿ ನಡೆಯುತ್ತಿತ್ತು ಅನ್ನುವುದು ಬಿಟ್ಟರೆ, ಕುಟ ಕುಟಿ ಮಂಡದ ಸಲಕರಣೆ ಅಟ್ಟ ಸೇರಿತ್ತು. ಕುಟ ಕುಟಿ ಗುಂಡಿನ ಸದ್ದು ಅಡಗಿತ್ತು. ಇದೀಗ ಅದರ ಸೌಂಡ್ ಅಧಿಕಾರಿಗಳ ಕಿವಿಗೆ ತಲುಪಿದರು ಕಿವುಡರಾಗಿದ್ದಾರೆ. ಈ ದಂದೆಯಲ್ಲಿ ಜಿಲ್ಲೆಯ ಹೊರತಾಗಿ, ಹೊರ ಜಿಲ್ಲೆಯವರು ಬರುತ್ತಿದ್ದಾರೆ.
ತಾಲೂಕಿನ ವಂದೂರು ಗುಡ್ಡ ಮತ್ತು ಕರ್ಕಿ ಮೂಡಗಣಪತಿ ಗುಡ್ಡ, ಜಲವಳ್ಳಿ, ಕೊಳಗದ್ದೆ, ಚಳ್ಳೆಕೆರೆ ಎಂಬಲ್ಲಿ ದೊಡ್ಡ ಮಟ್ಟದಲ್ಲಿ ಈ ಕರಾಳ ದಂದೆ ನಡೆಯುತ್ತಿದೆ. ಇಂತ ದಂದೆಗೆ ಕಡಿವಾಣ ಹಾಕಬೇಕು, ಬಡವರ ಕೂಲಿ ಕಾರ್ಮಿಮರ ದುಡಿದ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ದಂದೆ ನಡೆಸಲು ಗಣ್ಯರ, ರಾಜಕೀಯ ಹಿನ್ನಲೆ ಇರುವವರ ಕೈವಾಡ ಇದೆ ಎನ್ನಲಾಗ್ತಿದೆ. ತಕ್ಷಣ ಈ ಅಕ್ರಮ ದಂದೆಯ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ…