ಹೊನ್ನಾವರ ಮಾರ್ಚ್ 14 : ತಾಲೂಕಿನ ಗೇರುಸೊಪ್ಪ ದೇವಿಗದ್ದೆ ಮಜರೆಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನದ ಸಮೀಪ ತೋಟಕ್ಕೆ ನೀರನ್ನು ಹಾಯಿಸುವ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯೊರ್ವ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಗೇರುಸೊಪ್ಪ ದೇವಿಗದ್ದೆ ನಿವಾಸಿ ಭಾಸ್ಕರ ಕೃಷ್ಣ ನಾಯ್ಕ ಅವರು ಮಂಗಳವಾರ ಮದ್ಯಾಹ್ನ 2-30 ರ ಸುಮಾರಿಗೆ ಗೇರುಸೊಪ್ಪ ದೇವಿಗದ್ದೆ ಮಜರೆಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನದ ಹೊಸದಾಗಿ ಕಟ್ಟುತ್ತಿರುವ ಕಟ್ಟಡಕ್ಕೆ ನೀರು ಹೊಡೆಯುವ ಸಲುವಾಗಿ ಹೋಗಿದ್ದರು. ಅಲ್ಲಿ ದೇವಸ್ಥಾನದ ಕಟ್ಟಡ ಕೆಲಸ ಮಾಡುತ್ತಿದ್ದ ದೇವಿಗದ್ದೆ ನಿವಾಸಿ ಗಣೇಶ ಮಾದೇವ ನಾಯ್ಕ ಇವರನ್ನು ಪ್ರಶ್ನಿಸಿ, ತಾವು ಜಡ್ಡಿಯಿಂದ ತೋಟಕ್ಕೆ ನೀರನ್ನು ಹಾಯಿಸುವ ಸಲುವಾಗಿ ನಿರ್ಮಿಸಿದ ಪೈಪಲೈನಿನ ನೀರನ್ನು ಇವತ್ತು ಯಾರು ಹಾಯಿಸುತ್ತಿದ್ದಾರೆ ಎಂದು ಕೇಳಿದ್ದಾರೆ.
ಇದಕ್ಕೆ ಕುಪಿತನಾದ ಆರೋಪಿತ ದೇವಿಗದ್ದೆ ನಿವಾಸಿ ಮಹೇಶ ನಾರಾಯಣ ನಾಯ್ಕ ಎಂಬಾತ, ಭಾಸ್ಕರ ನಾಯ್ಕ ಅವರಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ನೀರಿನ ವಿಷಯ ದೇವಸ್ಥಾನದ ಹತ್ತಿರ ಮಾತನಾಡುತ್ತೀಯಾ? ಈ ವಿಷಯವನ್ನು ಹೊರಗಡೆ ಇಟ್ಟುಕೊ ಎಂದು ಅಡ್ಡಗಟ್ಟಿ ತಡೆದು, ಕೈಯಿಂದ ಮೈಮೇಲೆ ಹೊಡೆದಿದ್ದಾನೆ. ಅಲ್ಲದೇ ಕಬ್ಬಿಣದ ಎಂಗಲ್ ಪಟ್ಟಿಯಿಂದ ಎಡ ಕಿವಿಯ ಮೇಲೆ ಹೊಡೆದು ಗಾಯಗೊಳಿಸಿದ್ದಾನೆ. ಈ ದಿನ ತಪ್ಪಿಸಿಕೊಂಡಿದ್ದಿಯಾ ಮತ್ತೊಂದು ದಿನ ಕೊಲೆ ಮಾಡದೆ ಬಿಡುವದಿಲ್ಲ ಎಂದು ಜೀವಬೆದರಿಕೆ ಹಾಕಿದ ಬಗ್ಗೆ ಭಾಸ್ಕರ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..