ಹೊನ್ನಾವರ, ಮಾರ್ಚ್ 13 : ಪಟ್ಟಣ ಪಂಚಾಯತ್‌ನಲ್ಲಿ 2024-25 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯನ್ನು ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ರವಿರಾಜ್ ದೀಕ್ಷಿತ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಟ್ಟಣ ಪಂಚಾಯತ್‌ನ ಲೋಪ ದೋಷಗಳನ್ನು ಎತ್ತಿ ಹಿಡಿದು ಸಾರ್ವಜನಿಕರು ಹಾಗೂ ಸದಸ್ಯರು ಆಕ್ರೋಶ ಹೊರ ಹಾಕಿದ್ರು..
ಬಜೆಟ್ ಪೂರ್ವಭಾವಿ ಸಭೆಯನ್ನು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರವೀಣಕುಮಾರ್ ನಾಯಕ್ ಹಾಗೂ ಆಡಳಿತಾಧಿಕಾರಿ ರವಿರಾಜ್ ದೀಕ್ಷಿತ್ ಸಾರ್ವಜನಿಕರು ಹಾಗೂ ಪಟ್ಟಣ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ನಡೆಸಿದ್ರು. ಈ ವೇಳೆ ಹೊನ್ನಾವರ ಪಟ್ಟಣದಲ್ಲಿನ ಅವ್ಯವಸ್ಥೆ ಕುರಿತು ಸಾರ್ವಜನಿಕರು ಆಡಳಿತಾಧಿಕಾರಿಗಳ ವಿರುದ್ಧ ಗರಂ ಆದರು. ಜೊತೆಗೆ ಕಳೆದ 7 ತಿಂಗಳಿನಿಂದ ಸದಸ್ಯರ ಸಭೆ ನಡೆಸದಿರುವ ಕುರಿತು ಪಟ್ಟಣ ಪಂಚಾಯತ್ ಸದಸ್ಯರು ಪ್ರಶ್ನಿಸುವ ಮೂಲಕ ಮುಖ್ಯಾಧಿಕಾರಿಯನ್ನು ಹಾಗೂ ಆಡಳಿತಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ್ರು…
ಜೊತೆಗೆ ನಗರದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವ ಕುರಿತು, ಬೀದಿ ವ್ಯಾಪಾರಿಗಳ ಸಮಸ್ಯೆಗಳ ಕುರಿತು, ರಸ್ತೆ ಸಮಸ್ಯೆಯ ಕುರಿತು, ಪಟ್ಟಣ ಪಂಚಾಯತ್ ಅಧಿಕಾರಿಗಳು ಸರಿಯಾದ ಕ್ರಮ ತೆಗೆದುಕೊಳ್ಳದಿರುವುದನ್ನು ಖಂಡಿಸಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ರು. ಮೊದಲು ಇಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ನಂತರ ಬಜೆಟ್ ಮಂಡನೆಯ ವಿಚಾರ ಮಾಡಿ ಎಂದು ಪ.ಪಂಚಾಯತ್ ಮುಖ್ಯಾಧಿಕಾರಿಗಳನ್ನು ಎಲ್ಲರೂ ತರಾಟೆಗೆ ತೆಗೆದುಕೊಂಡರು. ನಗರದಲ್ಲಿನ ಅವ್ಯವಸ್ಥೆಯ ಕುರಿತು, ಅದನ್ನು ಸರಿಪಡಿಸುವ ಕುರಿತು ನಮಗೆ ಸರಿಯಾದ ಜವಾಬು ನೀಡಿ ಎಂದು ಸಾರ್ವಜನಿಕರು ಪಟ್ಟು ಹಿಡಿದರು..
ಒಟ್ಟಿನಲ್ಲಿ ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಲುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಭೆಯಲ್ಲಿ ಸಾರ್ವಜನಿಕರಿಂದ ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿದ್ದರೂ ಮುಖ್ಯಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದರು..
ಮನು ವೈದ್ಯ, ನುಡಿಸಿರಿ ನ್ಯೂಸ್, ಹೊನ್ನಾವರ