ರಾಷ್ಟ್ರ‌ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸಾಧನೆಗೈದ ಹೊನ್ನಾವರದ ಹಳ್ಳಿ ಪ್ರತಿಭೆ

ಯೋಗ ಒಂದು ಕಲೆ, ಕ್ರೀಡೆ, ವಿಜ್ಞಾನ, ಮನಶಾಸ್ತ್ರ ಹೀಗೆ ಹಲವು ವಿಷಯಗಳ ಸಂಗಮವೇ ಯೋಗ. ಯೋಗವನ್ನೇ ಧ್ಯೆಯವಾಗಿಸಿಕೊಂಡು ಸಾಧನೆ ಮಾಡಿರುವ ಸಾಧಕರು ಹಲವರಿದ್ದಾರೆ. ಹೊನ್ನಾವರದ ದಿ.ಕೆ.ಮೋಹನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿ ಮಹೇಂದ್ರ ಗಣಪತಿ ಗೌಡ ಯೋಗ ಸ್ಪರ್ಧೆಯಲ್ಲಿ 5 ಬಾರಿ ರಾಷ್ಟ್ರ ಮಟ್ಟಕ್ಕೆ 8 ಬಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿರುವ ಸಾಧಕ. ಮಹೇಂದ್ರ ಮೂಲತಃ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಗಣಪತಿ ಗೌಡ, ಮಹಾಲಕ್ಷ್ಮೀ ಗೌಡ ದಂಪತಿಗಳ ಪುತ್ರ. ಪ್ರಾಥಮಿಕ, ಪ್ರೌಢ ಶಾಲಾ ಹಂತದಲ್ಲಿಯೇ ಅದ್ಬುತ ಯೋಗಪಟುವಾಗಿದ್ದಾನೆ. ಖರ್ವಾ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವ್ಯಾಸಂಗದಲ್ಲಿದ್ದಾಗ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದಿದ್ದಾನೆ…


ಫ್ರೌಡಶಾಲೆ ಹಾಗೂ ಕಾಲೇಜು ವ್ಯಾಸಂಗದ ವೇಳೆಯು ಯೋಗವನ್ನು ಮುಂದುವರೆಸಿದ್ದಾನೆ. ಅಲ್ಲಿಂದ ನಿರಂತರವಾಗಿ ರಾಜ್ಯ, ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಕಾಲೇಜನ್ನು ಪ್ರತಿನಿಧಿಸುತ್ತಾ ಬರುತ್ತಿದ್ದಾನೆ. ಇದೀಗ ಛತ್ತಿಸ್‌ಘಡ್‌ನ ಬಿಲಾಯ್ ನಲ್ಲಿ ನಡೆದ ನಾಲ್ಕನೇ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ 2023-24 ರಲ್ಲಿ ಭಾಗವಹಿಸಿ ಆರ್ಟಿಸ್ಟಿಕ್ ಯೋಗ ಸಿಂಗಲ್ ನಲ್ಲಿ ದ್ವಿತೀಯ ಸ್ಥಾನ ಹಾಗೂ ಟ್ರೇಡಿಷನಲ್ ಯೋಗದಲ್ಲಿ ತೃತೀಯ ಸ್ಥಾನ ಪಡೆದು, ಬೆಳ್ಳಿ, ಕಂಚಿನ ಪದಕವನ್ನು ಪಡೆಯುವ ಮೂಲಕ ಮತ್ತೊಮ್ಮೆ ಯೋಗದಲ್ಲಿ ಸಾಧನೆಗೈದಿದ್ದಾನೆ. ಖ್ಯಾತ ಯೋಗಪಟು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ರಾಜೇಶ್ವರಿ ಹೆಗಡೆಯವರು ಸಾಧನೆಗೈದ ವಿದ್ಯಾರ್ಥಿಯ ಯೋಗ ಗುರುವಾಗಿದ್ದಾರೆ



ಮೊದಲಿಗೆ ಯೋಗ ಕಲಿಯಲು ಪ್ರೇರಣೆ ಪ್ರಾಥಮಿಕ ಶಾಲೆಯಲ್ಲಿ ಕಲಿಸಿದ ಯೋಗ ಗುರು ರಾಜೇಶ್ವರಿ ಹೆಗಡೆಯವರು. ಆನಂತರ ಪ್ರೌಢ ಶಿಕ್ಷಣದಲ್ಲಿ ರಮೇಶ್ ನಾಯ್ಕ, ಕಾಲೇಜು ಹಂತದಲ್ಲಿ ಯೋಗ ಕ್ಷೇತ್ರದಲ್ಲಿ ಸಾಧಿಸಲು ಯೋಗಗುರುಗಳಿಲ್ಲದಿದ್ದರು ಏಕಲವ್ಯನಂತೆ ಯೋಗಗುರು ರಾಜೇಶ್ವರಿ ಹೆಗಡೆಯವರ ಮಾರ್ಗದರ್ಶನದಲ್ಲಿ ಸಾಧನೆಗೈದಿದ್ದಾನೆ. ನನ್ನ ಮನೆ, ನಾನು ಕಲಿತ ಎಲ್ಲ ಶಿಕ್ಷಣ ಸಂಸ್ಥೆ, ಶಿಕ್ಷಕರು ತುಂಬಾನೇ ಬೆಂಬಲ ನೀಡಿದ್ದಾರೆ. ಯೋಗದಿಂದ ಮನಸ್ಸಿನ ನಿಯಂತ್ರಣ, ಉತ್ತಮ ಕಲಿಕೆ, ಎಲ್ಲ ಸಾಧನೆಗೂ ಯೋಗ ಸಹಕಾರಿ ಎಂದು ಮಹೇಂದ್ರ ನುಡಿಸಿರಿವಾಹಿನಿ ಪ್ರತಿನಿಧಿ ನಾಗರಾಜ ನಾಯ್ಕ ನಡೆಸಿದ ಕಿರುಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.



ಇನ್ನೂ ಈ ಯೋಗಸಾಧಕನ ಸಾಧನೆಗೆ ಗ್ರಾಮಸ್ಥರು,ಶಿಕ್ಷಣ ಪ್ರೇಮಿಗಳು ಅಭಿನಂದಿಸಿ,ಹರ್ಷ ವ್ಯಕ್ತಪಡಿಸಿದ್ದಾರೆ. ಖರ್ವಾ ಗ್ರಾಮ ಪಂಚಾಯತ ವತಿಯಿಂದ ಪಿಡಿಒ ರಮೇಶ್ ನಾಯ್ಕ,ಕಾರ್ಯದರ್ಶಿ ಎನ್ ಎಚ್ ಅಂಬಿಗ,ನಾರಾಯಣ ಗೌಡ,ಮನೋಜ್ ನಾಯ್ಕ ಸೇರಿದಂತೆ ಸಿಬ್ಬಂದಿ ವರ್ಗ ಮಹೇಂದ್ರನಿಗೆ ಸನ್ಮಾನಿಸಿ ಅಭಿನಂದಿಸಿದ್ದಾರೆ. ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ್ ನಾಯ್ಕ ಸಾಧಕನ ಮನೆಗೆ ತೆರಳಿ ಸನ್ಮಾನಿಸಿ ಅಭಿನಂಧಿಸುವ ಮೂಲಕ ಪ್ರತಿಭೆಗೆ ಪ್ರೋತ್ಸಾಹಿಸಿದರು.

ಮುಂದಿನ ಹಂತ ಶ್ರೀಲಂಕಾದಲ್ಲಿ ನಡೆಯುವ ಎಷ್ಯನ್ ಯೋಗಾಶನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಯೋಗಪಟು ಮಹೇಂದ್ರ ಅವಕಾಶ ಪಡೆದಿದ್ದಾನೆ. ಬಡಕುಟುಂಬದಿಂದ ಬೆಳಗಿರುವ ಈ ಪ್ರತಿಭಾನ್ವಿತನಿಗೆ ಮುಂದಿನ ಹಂತದ ಸಾಧನೆಗೆ ತೆರಳಲು ಆರ್ಥಿಕ ಸಹಾಯವು ಅಗತ್ಯವಾಗಿರುತ್ತದೆ. ಜನಪ್ರತಿನಿಧಿಗಳು,ಶಿಕ್ಷಣ ಪ್ರೇಮಿಗಳು ಇಂತಹ ಹಳ್ಳಿ ಪ್ರತಿಭೆಗೆ ಪ್ರೋತ್ಸಾಹಿಸಬೇಕಿದೆ.