ಕಾರವಾರ, ಏಪ್ರಿಲ್ 6: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲೆಂದು ಪ್ರಾರ್ಥಿಸಿ ವ್ಯಕ್ತಿಯೊಬ್ಬ ಎಡಗೈ ಬೆರಳನ್ನು ಕತ್ತರಿಸಿ ರಕ್ತ ತರ್ಪಣ ಮಾಡಿದ ಭಯಾನಕ ಘಟನೆ ಕಾರವಾರದ ಸೋನಾರವಾಡದಲ್ಲಿ ನಡೆದಿದೆ. ಕೈಬೆರಳು ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ ವ್ಯಕ್ತಿಯನ್ನು ಅರುಣ್ ವರ್ಣೇಕರ್ ಎಂದು ಗುರುತಿಸಲಾಗಿದೆ. ಅರುಣ್, ಮೋದಿಗಾಗಿ ಗುಡಿಯೊಂದನ್ನು ನಿರ್ಮಿಸಿ ಪೂಜೆ ಕೂಡ ಮಾಡುತ್ತಿದ್ದಾರೆ.
ಬೆರಳು ಕತ್ತರಿಸಿಕೊಂಡು ಅರುಣ್, ‘ಮೋದಿ ಮತ್ತೆ ಪ್ರಧಾನಿಯಾಗಬೇಕು’ ಎಂದು ಗೋಡೆ ಮೇಲೆ ರಕ್ತದಲ್ಲಿ ಬರೆದಿದ್ದಾರೆ. ಬೆರಳನ್ನು ಕತ್ತರಿಸಿ ಅದರಿಂದ ಸುರಿದ ರಕ್ತದಲ್ಲಿ, ‘ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ’ ಎಂದು ಬರೆದಿದ್ದಾರೆ. ‘ಮೋದಿ ಬಾಬಾ ಪಿಎಂ, 3 ಬಾರ್ 78ತಕ್ 378, 378+ ಮೇರಾ ಮೋದಿ ಬಾಬಾ ಸಬ್ ಸೆ ಮಹಾನ್ ಎಂದು ಗೋಡೆ ಮೇಲೆ ಹಾಗೂ ಪೋಸ್ಟರ್ನಲ್ಲಿ ಅರುಣ್ ಬರೆದುಕೊಂಡಿದ್ದಾರೆ…
ಮೋದಿ ಮೊದಲ ಬಾರಿ ಚುನಾವಣೆಗೆ ನಿಂತಾಗ ಕೂಡ ಇದೇ ಅರುಣ್ ವರ್ಣೇಕರ್ ರಕ್ತದಲ್ಲಿ ಕಾಳಿಗೆ ಹರಕೆ ಅರ್ಪಿಸಿದ್ರು. ಈ ಹಿಂದೆಯೂ ಬೆರಳು ಕತ್ತರಿಸಿಕೊಂಡು ಮೋದಿ ಗೆಲುವಿಗಾಗಿ ಕಾಳಿ ಮಾತೆಗೆ ಹರಕೆ ಕೊಟ್ಟಿದ್ರು. ಇದು ಕೊನೆಯ ಬಾರಿ ಆದ್ದರಿಂದ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಬೆರಳನ್ನೇ ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ್ದಾರೆ.
ಇನ್ನು ಅರುಣ್ ವರ್ಣೇಕರ್ ಕಳೆದ ವರ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಅಂಕೋಲಾಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಲು ಪ್ರಯತ್ನಿಸುವುದಾಗಿ ತಿಳಿಸಿದ್ದರು. ಆದರೆ, ಅವರ ಬಯಕೆ ಈಡೇರಿರಲಿಲ್ಲ.