ತ್ಯಾಜ್ಯ ವಿಸರ್ಜನೆಗೆ ಕಡಿವಾಣ ಹೇರುವವರೇ ಕೈಚೆಲ್ಲಿ ಕಸದ ರಾಶಿ ನಿರ್ಮಿಸಿದರೇ?

ಅಂಕೋಲಾ : ಬಳಸಿ ಬಿಸಾಡಲಾಗಿದ್ದ ಪ್ಲಾಸ್ಟಿಕ್ ಚೀಲಗಳು ಮತ್ತಿತರ ತ್ಯಾಜ್ಯಗಳನ್ನು ಕೇರಳದಿಂದ ತುಂಬಿಕೊಂಡು ಗುಲ್ಬರ್ಗ ಕಡೆ ಹೊರಟಿತ್ತು ಎನ್ನಲಾದ KA 22 D 8052 ನೊಂದಣಿ ಸಂಖ್ಯೆಯ ಭಾರೀ ವಾಹನ, ರಾಷ್ಟ್ರೀಯ ಹೆದ್ದಾರಿ 63ರ ಅಂಕೋಲಾ- ಹುಬ್ಬಳ್ಳಿ ಮಾರ್ಗ ಮಧ್ಯೆ ಅಂಕೋಲಾ ತಾಲೂಕಿನ ಕಂಚಿನ ಬೈಲ್ ಬಳಿ ಸಾಗುತ್ತಿದ್ದಾಗ,ಅದಾವುದೋ ಕಾರಣದಿಂದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿದ್ದರು.ಈ ವೇಳೆಗಾಗಲೇ ಲಾರಿಯ ಮುಂಭಾಗ ಬಹುತೇಕ ಸುಟ್ಟು ಕರಕಲಾಗಿತ್ತಲ್ಲದೇ,ಲಾರಿಯಲ್ಲಿ ತುಂಬಿಕೊಂಡಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಕ್ಕೂ ಬೆಂಕಿ ಮತ್ತು ಶಾಖ ತಗುಲಿದ್ದರಿಂದ,ಕೆಲ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಸುಟ್ಟು ಕರಗುವಂತಾಗಿತ್ತು.ಅದಾದ ಬಳಿಕ,ಲಾರಿಯಲ್ಲಿದ್ದ ಸಂಪೂರ್ಣ ತ್ಯಾಜ್ಯ ರಾಶಿಯನ್ನು ಹೆದ್ದಾರಿ ಅಂಚಿನಲ್ಲಿಯೇ ಇಳಿಸಿ, ಬೆಂಕಿ ಅವಘಡದಿಂದ ಹಾನಿಗೊಳಗಾಗಿದ್ದ ಲಾರಿಯನ್ನು ದುರಸ್ಥಿ ಇಲ್ಲವೇ ಇತರೆ ಕಾರಣಗಳಿಂದ ಬೇರೆಡೆ ಸ್ಥಳಾಂತರಿಸಲಾಗಿತ್ತು.
ಕಳೆದ ಫೆ 20 ರಂದು ಈ ಅಗ್ನಿ ಅವಘಡ ಸಂಭವಿಸಿ, ಅದಾದ ಬಳಿಕ ತಿಂಗಳುಗಳೇ ಕಳೆದರೂ ಸಹ ಸಂಬಂಧಿಸಿದವರು ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳದೇ , ಟನ್ ಗಟ್ಟಲೆ ತ್ಯಾಜ್ಯವನ್ನು ಹೆದ್ದಾರಿಯಲ್ಲಿ ಹಾಗೆಯೇ ಇಳಿಸಿ ಹೋಗಿದ್ದು,ಅವರ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನವನ್ನು ಎತ್ತಿ ತೋರಿಸುವಂತಿತ್ತು.


ಈ ನಡುವೆ ರಾಶಿ ರಾಶಿಯಾಗಿ ಗುಡ್ಡೆಯಾಕಾರದಲ್ಲಿ ಬಿದ್ದಿದ್ದ ತ್ಯಾಜ್ಯದಿಂದ ಅಲ್ಲಿ ಅಸಹ್ಯಕರ ವಾತಾವರಣ ನಿರ್ಮಾಣವಾಗಿ ಸ್ಥಳೀಯರಿಗೆ ಮತ್ತು ಹೆದ್ದಾರಿ ಸಂಚಾರಿಗಳಿಗೆ ಕಿರಿ ಕಿರಿ ಯಾದಂತ್ತಿತ್ತಲ್ಲದೇ, ಕೆಲ ಜಾನುವಾರುಗಳ ಜೀವಕ್ಕೂ ಕುತ್ತು ತರುವಂತಿತ್ತು. ಇಷ್ಟು ಸಾಲದೆಂಬಂತೆ ಅದೇ ತ್ಯಾಜ್ಯಕ್ಕೆ ಕೊನೆ ಹಂತದಲ್ಲಿ ಅದಾರೋ ಬೆಂಕಿ ಹಚ್ಚಿ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಅಲ್ಲಿಯೇ ಸುಡಲು ಮುಂದಾದಂತಿದ್ದು, ಅದರ ಪರಿಣಾಮವಾಗಿ ತ್ಯಾಜ್ಯ ರಾಶಿ ನಿಧಾನವಾಗಿ ಕರಗಲಾರಂಭಿಸಿದೆ. ಆದರೆ ಇದೇ ವೇಳೆ ,3- 4 ದಿನಗಳ ಕಾಲ ಸುತ್ತಮುತ್ತಲ ಪ್ರದೇಶದಲ್ಲಿ ಘಾಟು ವಾಸನೆ ಮತ್ತು ಅಪಾಯಕಾರಿ ದಟ್ಟ ಹೊಗೆ ಹೊರಸೂಸುವಂತಾಗಿತ್ತು,ಆದರೆ ಅದನ್ನು ಪ್ರಶ್ನಿಸಬೇಕಿದ್ದ ಇಲ್ಲವೇ ಅಂಥವರ ವಿರುದ್ಧ ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಳ್ಳಬೇಕಿದ್ದ ಸಂಬಂಧಿತ ಕೆಲ ಇಲಾಖೆಗಳು, ಅದೇಕೊ ಕಣ್ಣಿದ್ದೂ ಕುರುಡಾದವೇ ? , ಪ್ಲಾಸ್ಟಿಕ್ ತ್ಯಾಜ್ಯಗಳನ್ನು ,ಮರುಬಳಕೆ, ಇಲ್ಲವೇ ಸಂಸ್ಕರಣೆ ಉದ್ದೇಶಕ್ಕೆ ಮತ್ತೆ ಇಲ್ಲಿಂದ ವಿಲೇವಾರಿ ಮಾಡುವುದು ದುಬಾರಿಯಾಗಬಹುದೆಂಬ ಕಾರಣದಿಂದಲೋ ಏನೋ ಎಂಬಂತೆ ಹೊಂದಾಣಿಕೆ ಮಾಡಿಕೊಂಡು,ತ್ಯಾಜ್ಯವನ್ನು ಇಲ್ಲಿಯೇ ಸುಟ್ಟು ಕರಗಿಸಲು ವ್ಯವಸ್ಥಿತ ಸಂಚಿನ ಯೋಜನೆ ಮೊದಲೇ ರೂಪಿಸಿಕೊಂಡಿದ್ದರೇ ಎಂಬ ಸಂಶಯದ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಂತಿದೆ.


ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತಿತರ ಸಂಬಂಧಿತ ಇಲಾಖೆಗಳು ಈಗಲಾದರೂ ಎಚ್ಚೆತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು,ಪರಿಸರ ಹಾನಿ ಮತ್ತು ವಾಯು ಮಾಲಿನ್ಯದಂತ ಇಂತಹ ಘಟನೆಗಳು ಮತ್ತೆ ಮರುಕಳಿಸಿದಂತೆ ಕಟ್ಟೆಚ್ಚರ ವಹಿಸಲಿ ಮತ್ತು ಹೆದ್ದಾರಿಯ ಇಕ್ಕೆಲಗಳ ಅಂಚಿನಲ್ಲಿ ಆಗಾಗ ಬೇರೆ ಬೇರೆ ರೀತಿಯ ತ್ಯಾಜ್ಯಗಳನ್ನು ತಂದು ಸುರಿದು ಹೋಗುವ ಇತರ ವಾಹನಗಳ ಮೇಲೂ ಸೂಕ್ತ ಕ್ರಮ ಜರುಗಿಸಲೇಬೇಕೆಂಬ ಆಗ್ರಹದ ಮಾತು, ಪರಿಸರ ಪ್ರೇಮಿಗಳು ಮತ್ತು ತಾಲೂಕಿನ ಕೆಲ ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ.