ಶಿವರಾಂ ಹೆಬ್ಬಾರ್​ ಸಮಸ್ಯೆ ಏನೆಂದು ಗೊತ್ತಾಗುತ್ತಿಲ್ಲ, ಬಾಯಿ ಬಿಟ್ಟು ಹೇಳಬೇಕಲ್ವಾ: ರೂಪಾಲಿ ನಾಯ್ಕ್

ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿರುವ ಶಾಸಕ ಶಿವರಾಂ ಹೆಬ್ಬಾರ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಲ್ಲದೆ, ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನಲಾಗ್ತಿದೆ. ಆದರೆ, ಕೈ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಮಾತನಾಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ನಾಯ್ಕ್ ಅವರು, ಶಿವರಾಂ ಹೆಬ್ಬಾರ್ ಅವರಿಗೆ ಆಗಿರುವ ಸಮಸ್ಯೆ ಏನು ಅಂತಾ ಬಾಯಿಬಿಟ್ಟು ಹೇಳಬೇಕಲ್ವಾ ಎಂದು ಪ್ರಶ್ನಿಸಿದ್ದಾರೆ…

ಕಾರವಾರ, ಮಾರ್ಚ್‌ – 31: ಶಿವರಾಂ ಹೆಬ್ಬಾರ್ (Shivaram Hebbar) ಅವರಿಗೆ ಆಗಿರುವ ಸಮಸ್ಯೆ ಏನು ಅಂತಾ ಬಾಯಿಬಿಟ್ಟು ಹೇಳಬೇಕಲ್ವಾ ಎಂದು ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ್ (Roopali Naik) ಹೇಳಿದ್ದಾರೆ. ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿರುವ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಲ್ಲದೆ, ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನಲಾಗ್ತಿದೆ..

ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ರೂಪಾಲಿ ನಾಯ್ಕ್ ಅವರು, ನಾನು ಉಪಾಧ್ಯಕ್ಷೆ ಆದ ಬಳಿಕ ಹೆಬ್ಬಾರ್ ಭೇಟಿ ಆಗಿ ಮಾತನಾಡಿದ್ದೆ. ಹೆಬ್ಬಾರ್ ಯಾವ ತೀರ್ಮಾನ ತೆಗೆದುಕೊಳ್ಳದೆ ಬಿಜೆಪಿಯಲ್ಲೇ ಇದ್ದಾರೆ. ಅವರಿಗೆ ಯಾವ ಮಟ್ಟದಲ್ಲಿ ಏನು ಸಮಸ್ಯೆ ಆಗಿದೆ ಎಂದು ನಮಗ್ಯಾರಿಗೂ ಅರ್ಥವಾಗುತ್ತಿಲ್ಲ. ಏನೇ ಸಮಸ್ಯೆ ಇದ್ದರೂ ಅದನ್ನು ಹೇಳಬೇಕು. ಹೇಳದಿದ್ದರೆ ನಾವೇನು ಮಾಡಲು ಸಾಧ್ಯ ಎಂದು ಕೇಳಿದ್ದಾರೆ.

ಶಿವರಾಂ ಹೆಬ್ಬಾರ್ ಅವರಿಗೆ ಏನೇ ಸಮಸ್ಯೆ ಇದ್ದರೂ ಪಕ್ಷದ ನಾಯಕರೊಂದಿಗೆ ಮಾತನಾಡಿ ಬಗೆಹರಿಸಿಕೊಂಡು ಪಕ್ಷದ ಪರ ಕೆಲಸ ಮಾಡಲಿ. ಕಾರವಾರ-ಅಂಕೋಲದಲ್ಲಿ ಆದಷ್ಟು ಸಮಸ್ಯೆ ಎಲ್ಲೂ ಆಗಿಲ್ಲ. ಇಂದು ಮಾತನಾಡುತ್ತಿರುವವರೇ ನನ್ನ ಸೋಲಿಸಲು ಕೆಲಸ ಮಾಡಿದ್ದರು. ಚುನಾವಣೆಯಲ್ಲಿ ಸೋತಿದ್ದೇನೆ. ಆದರೆ ಅದನ್ನೇ ತಲೆಯಲ್ಲಿ ಇಟ್ಟುಕೊಂಡಿಲ್ಲ. ನಮ್ಮ ಪಕ್ಷದ ನಾಯಕರ ಆದೇಶಕ್ಕೆ ಬೆಲೆ ಕೊಟ್ಟು ಕೆಲಸ ಮಾಡುತ್ತಿದ್ದೇನೆ ಎಂದರು.

ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಜೊತೆ ಇದುವರೆಗೂ ನಾನು ಮಾತನಾಡಿಲ್ಲ. ಹೆಗಡೆ ಅವರು ನಮ್ಮ ಅಭ್ಯರ್ಥಿ ಪರ ಕೆಲಸ ಮಾಡುವ ವಿಶ್ವಾಸವಿದೆ ಎಂದು ಹೇಳಿದರು. ಈ ಹಿಂದೆ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ರೂಪಾಲಿ, ನನ್ನ ಸೋಲಿಗೆ ಹೆಗಡೆ ಅವರೇ ಕಾರಣ. ಅವರು ನನ್ನ ಪರ ಪ್ರಚಾರ ಮಾಡುತ್ತಿದ್ದರೆ ನಾನು ಗೆಲ್ಲುತ್ತಿದ್ದೆ ಎಂದು ಹೆಗಡೆ ಮುಂದೆಯೇ ಹೇಳಿಕೆ ನೀಡಿದ್ದರು. ಸದ್ಯ, ಟಿಕೆಟ್ ಕೈತಪ್ಪಿದ ನಂತರ ಅನಂತಕುಮಾರ್ ಹೆಗಡೆ ಅವರು ಯಾರ ಸಂಪರ್ಕಕ್ಕೂ ಸಿಗದೆ ಮನೆಯಲ್ಲೇ ಕುಳಿತುಕೊಂಡಿದ್ದಾರೆ.