ನಾನು ಉತ್ತರಕನ್ನಡದವಳಲ್ಲ ಎನ್ನುವ ಬಿಜೆಪಿಗರೂ ಪ್ರಚಾರಕ್ಕೆ ನನ್ನ ಕ್ಷೇತ್ರಕ್ಕೇ ಬರಬೇಕು: ಡಾ.ಅಂಜಲಿ ನಿಂಬಾಳ್ಕರ್ ವ್ಯಂಗ್ಯ

ಅಂಕೋಲಾ, ಮಾರ್ಚ್‌ 27 : ಜಾತಿ- ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಬಿಜೆಪಿಗರು ಉತ್ತರಕನ್ನಡದ ಹೆಸರು ಕೆಡಿಸಿರುವುದನ್ನ ಸರಿಪಡಿಸಲು ನಮಗೆ ಈ ಬಾರಿ ಅವಕಾಶವಿದೆ. ನಾನು ಜಿಲ್ಲೆಯವಳಲ್ಲ ಎನ್ನುವ ಬಿಜೆಪಿಗರು ಕೂಡ ನನ್ನ ಕ್ಷೇತ್ರಕ್ಕೆ ಬರಲೇಬೇಕು. ಬಹುಶಃ ಅವರಿಗೆ ಖಾನಾಪುರ ಬ್ಲಾಕ್ ಎಲ್ಲಿದೆ ಎನ್ನುವುದೂ ಗೊತ್ತಿರಲಿಕ್ಕಿಲ್ಲ, ಯಾಕೆಂದರೆ ಅಲ್ಲಿಗೆ ಅವರು ಬರುವುದೇ ಅಪರೂಪ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ವ್ಯಂಗ್ಯವಾಡಿದರು.

ಅಂಕೋಲಾದ ನಾಡವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ೩೦ ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದೆ ಎಂದು ಮಾಧ್ಯಮದವರು ಹೇಳುತ್ತಿದ್ದರು. ಆದರೆ, ಪ್ರತಿ ಕಾರ್ಯಕರ್ತರೂ ನಾನೇ ಅಂಜಲಿ ನಿಂಬಾಳ್ಕರ್ ಎಂಬಂತೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಈ ಭದ್ರ ಕೋಟೆಯನ್ನ ಒಡೆಯಲು ಹೆಚ್ಚೇನು ಶ್ರಮ ಬೇಕಿಲ್ಲವೆಂದೆನಿಸುತ್ತಿದೆ. ರಾಜಕೀಯ ನನಗೆ ಹೊಸದಲ್ಲ. ಖಾನಾಪುರದಲ್ಲಿ ಕೇವಲ ಮಹಿಳೆಯರಿಗಾಗಿ ಎಂಸಿಎಚ್ ಆಸ್ಪತ್ರೆ ಕಟ್ಟಿದ್ದೇನೆ. ಕಾಡುಪ್ರದೇಶದಲ್ಲಿ ಅಂಥದ್ದೊಂದು ಆಸ್ಪತ್ರೆ ಕಟ್ಟಿಸಬೇಕೆಂಬುದು ನನ್ನ ಕನಸಾಗಿತ್ತು. ಬಿಜೆಪಿ ಸರ್ಕಾರವಿದ್ದರೂ ಅಂಥ ದೊಡ್ಡ ಆಸ್ಪತ್ರೆ ಕಟ್ಟಿ ತೋರಿಸಿದ್ದೀನಿ. ಜಿಲ್ಲೆಯಲ್ಲೂ ಸುಸಜ್ಜಿತ ಆಸ್ಪತ್ರೆ ಆಗಬೇಕೆಂಬ ಆಸೆ ಇಲ್ಲಿಯ ಜನರದ್ದಿದೆ, ಅದನ್ನ ಮಾಡಲು ಪ್ರಯತ್ನಿಸೋಣ ಎಂದರು.

ನಮ್ಮಲ್ಲಿ ಬಿಜೆಪಿಗರಂತೆ ಸುಳ್ಳು ಹೇಳುವ ಕಾರ್ಯಕರ್ತರು ಇಲ್ಲ. ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಯುವಜನರಿಗೆ ಉದ್ಯೋಗ, ಮಹಿಳೆಯರ ಸಬಲೀಕರಣ, ಅರಣ್ಯ ಅಕ್ರಮ- ಸಕ್ರಮಕ್ಕಾಗಿ ನಾವು ದುಡಿಯಬೇಕಿದೆ. ಸಂಸದಳಾಗಿ ಆಯ್ಕೆಯಾದರೆ ನಿಮ್ಮ ಹೋರಾಟದ ಜೊತೆಗೆ ನನ್ನ ಧ್ವನಿಯೂ ಸೇರಲಿದೆ. ಸಂಸತ್ ನಲ್ಲಿ ಹೋರಾಡಲು ನಾನು ಸಿದ್ಧಳಿದ್ದೇನೆ. ಕಾರವಾರ ಕ್ಷೇತ್ರ ಕೂಡ ಈ ದೇಶದಲ್ಲಿ ಇದೆ ಎನ್ನುವುದನ್ನ ಸಂಸತ್ ನಲ್ಲಿ ತೋರಿಸುತ್ತೇನೆ. ಸಾಕಷ್ಟು ಜನರಿಗೆ ಖಾನಾಪುರ ಕರ್ನಾಟಕಕ್ಕೆ ಬರುತ್ತದೋ, ಮಹಾರಾಷ್ಟ್ರಕ್ಕೆ ಬರುತ್ತದೋ ಎಂಬುದು ಗೊತ್ತೇ ಇಲ್ಲ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಆಯ್ಕೆಯಾಗಿ ಖಾನಾಪುರದಲ್ಲೂ ಕಾಂಗ್ರೆಸ್ಸಿಗರು ಇದ್ದಾರೆ ಎಂಬುದನ್ನ ತೋರಿಸಿಕೊಟ್ಟಿದ್ದೇನೆ‌. ನಿಮ್ಮೆಲ್ಲರ ಆಶೀರ್ವಾದವಿದ್ದರೆ ಕ್ಷೇತ್ರದಲ್ಲಿ ಸಂಸದಳಾಗುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಡಬಲ್ ಎಂಜಿನ್ ಸರ್ಕಾರವಿದ್ದರೂ ಬಿಜೆಪಿಗರಿಂದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಆಗಿಲ್ಲ. ಸುಳ್ಳು ಹೇಳುವುದಷ್ಟೇ ಬಿಜೆಪಿಗರ ಕೆಲಸವಾಗಿದೆ. ಈಗಾಗಲೇ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರೊಂದಿಗೆ ಸುಸಜ್ಜಿತ ಇನ್ನೊಂದು ಆಸ್ಪತ್ರೆ ಕೂಡ ಶೀಘ್ರವೇ ನಿರ್ಮಾಣವಾಗಲಿದೆ. ನಮ್ಮ ಪಕ್ಷ ಒಬ್ಬ ವೈದ್ಯರನ್ನೇ ಈಗ ಲೋಕಸಭಾ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರ ಆಸೆ ಕೂಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವುದಾಗಿದೆ. ಇದಕ್ಕಾಗಿ ನಾವೆಲ್ಲ ಶಾಸಕರು ಕೂಡ ಒಂದಾಗಿದ್ದೇವೆ‌ ಎಂದರು.

ಕೆಪಿಸಿಸಿ ಸದಸ್ಯ ರಮಾನಂದ ನಾಯಕ ಮಾತನಾಡಿ, ಚುನಾವಣಾ ಪೂರ್ವ ಮನೆ ಮನೆಗೆ ಹಂಚಿದ್ದ ಗ್ಯಾರಂಟಿ ಕಾರ್ಡ್ ಗಳು ಈಗ ಅನುಷ್ಠಾನಗೊಂಡಿದೆ. ನುಡಿದಂತೆ ನಮ್ಮ ಸರ್ಕಾರ ನಡೆದುಕೊಳ್ಳುವ ಮೂಲಕ ನಮಗೆ ಮತ ಕೇಳುವ ನೈತಿಕ ಹಕ್ಕನ್ನು ದೊರಕಿಸಿಕೊಟ್ಟಿದೆ ಎಂದರು‌.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ನಮ್ಮಲ್ಲಿ ಯಾವ ಜಾತಿ- ವರ್ಗ ಇಲ್ಲ. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಸಮಾನ ಅವಕಾಶ, ಸಮಾನ ಹಕ್ಕು. ಸಾಮಾಜಿಕ ನ್ಯಾಯ, ಸಮಾನತೆಯನ್ನ ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ಯಾವತ್ತೂ ಹಿಂದುಳಿದಿಲ್ಲ. ಸಾಮಾಜಿಕ ನ್ಯಾಯ ಕಾಂಗ್ರೆಸ್ ನ ರಕ್ತದಲ್ಲೇ ಇದೆ. ಪ್ರತಿ ಮನೆಯೂ ಒಂದಲ್ಲಾ ಒಂದು ಕಾಂಗ್ರೆಸ್ ಯೋಜನೆಗಳ ಫಲಾನುಭವಿಗಳಾಗಿದ್ದಾರೆ‌. ಬಡ, ಹಿಂದುಳಿದವರಿಗಾಗಿ ಪಕ್ಷ ಯಾವತ್ತೂ ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಯಾದ ಡಾ.ಅಂಜಲಿ ನಿಂಬಾಳ್ಕರ್ ಅವರನ್ನ ಪ್ರಚಂದ ಬಹುಮತದಿಂದ ಆರಿಸಿ ತರಬೇಕಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿ, ೩೦ ವರ್ಷಗಳಲ್ಲಿ ಜಿಲ್ಲೆಯನ್ನ ಬಿಜೆಪಿ ಸಂಸದರು ಆಳಿದರು. ಒಮ್ಮೆ ಕಾಂಗ್ರೆಸ್ ನಿಂದ ಮಾರ್ಗರೆಟ್ ಆಳ್ವಾ ಆಯ್ಕೆಯಾಗಿ ಮಾಡಿದ ಕೆಲಸಗಳನ್ನ ಬಿಜೆಪಿ ಸಂಸದರಿಗೆ ಆಗಿಲ್ಲ. ಹೀಗಾಗಿ ಸಂಸದರು ಕೆಲಸ ಮಾಡಲ್ಲ ಅನ್ನೋ ಕಾರಣಕ್ಕೆ ಬಿಜೆಪಿಗರೇ ಅಭ್ಯರ್ಥಿಯನ್ನ ಈ ಬಾರಿ ಬದಲಿಸಿದ್ದಾರೆ. ಎಷ್ಟೇ ಮೋದಿ ಬಂದರೂ ಕಾಂಗ್ರೆಸನ್ನ ಹಠಾವೋ ಮಾಡಲು ಸಾಧ್ಯವಿಲ್ಲ ಎಂದರು‌.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಪ್ರಮುಖರಾದ ಜಿ.ಎಂ.ಶೆಟ್ಟಿ, ನಾರಾಯಣ ನಾಯಕ, ಬಿ.ಡಿ.ನಾಯಕ, ಶಂಭು ಶೆಟ್ಟಿ, ನವಾಜ್ ಶೇಖ್, ಆರ್.ಎಚ್.ನಾಯ್ಕ, ವಿನೋದ ನಾಯಕ ಮುಂತಾದವರಿದ್ದರು.