ಕಚ್ಚತೀವು ದ್ವೀಪ ಹಸ್ತಾಂತರ ಪ್ರತಿ ಭಾರತೀಯನನ್ನೂ ಕೆರಳಿಸಿದೆ; ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

1974ರಲ್ಲಿ ಕಾಂಗ್ರೆಸ್​ನ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಇದ್ದಾಗ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸುವ ನಿರ್ಧಾರದ ಬಗ್ಗೆ ಪಿಎಂ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ದೇಶದ ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ದೆಹಲಿ, ಮಾರ್ಚ್​.31: 1974ರಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎಕ್ಸ್​ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್‌ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಚ್ಚತೀವುವನ್ನು ಶ್ರೀಲಂಕಾಗೆ ಹಸ್ತಾಂತರಿಸುವ ಇಂದಿರಾ ಗಾಂಧಿ (Indira Gandhi) ಸರ್ಕಾರದ ನಿರ್ಧಾರವನ್ನು ಆರ್‌ಟಿಐ ವರದಿ ಬಹಿರಂಗಪಡಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಟೀಕಿಸಿದ್ದಾರೆ.

ಶ್ರೀಲಂಕಾ ದ್ವೀಪ ಬಿಟ್ಟುಕೊಟ್ಟ ಇಂದಿರಾ ಗಾಂಧಿ ಸರ್ಕಾರದ ನಿರ್ಧಾರದ ಬಗ್ಗೆ ವಿವರವಾದ ವಿವರಣೆಯನ್ನು ನೀಡಿದ್ದ ಖಾಸಗಿ ಸುದ್ದಿ ಪತ್ರಿಕೆಯ ಲೇಖನವನ್ನು ಹಂಚಿಕೊಂಡ ಪ್ರಧಾನಿ ಮೋದಿ, “Eye-opening and startling, “ಕಣ್ಣು ತೆರೆಸುವ ಮತ್ತು ಆಶ್ಚರ್ಯಕರ” ಎಂದು ಬರೆದು ಕಾಂಗ್ರೆಸ್ ಪಕ್ಷವನ್ನು ನಂಬಲು ಸಾಧ್ಯವಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ನರೇಂದ್ರ ಮೋದಿ ಪೋಸ್ಟ್

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ದ್ವೀಪವನ್ನು ಹಸ್ತಾಂತರ ಮಾಡಿದ್ದು “ಕೆಟ್ಟ” ನಿರ್ಧಾರ. 1974 ರಲ್ಲಿ ಕಾಂಗ್ರೆಸ್ ಸರ್ಕಾರವು ಕಚ್ಚತೀವು ಹಸ್ತಾಂತರಿಸಿದ್ದು ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ನಾವು ಕಾಂಗ್ರೆಸ್ ಅನ್ನು ಎಂದಿಗೂ ನಂಬಲು ಸಾಧ್ಯವಿಲ್ಲ. ಭಾರತದ ಏಕತೆ, ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುವುದು ಕಾಂಗ್ರೆಸ್‌ 75 ವರ್ಷಗಳಿಂದ ಮಾಡಿಕೊಂಡು ಬಂದಿರುವ ಕೆಲಸ ಮತ್ತು ಎಣಿಕೆಯ ಮಾರ್ಗವಾಗಿದೆ ಎಂದು ಎಕ್ಸ್ ನಲ್ಲಿ ಪ್ರಧಾನಿ ಮೋದಿ ಬರೆದಿದ್ದಾರೆ.

1974ರಲ್ಲಿ ಗಾಂಧಿ ಸರ್ಕಾರ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ನೀಡಿತ್ತು ಎಂದು ಕಳೆದ ವರ್ಷ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ‘ಇವರು ರಾಜಕೀಯಕ್ಕಾಗಿ ಭಾರತ ಮಾತೆಯನ್ನು ಮೂರು ಭಾಗ ಮಾಡಿದ್ದಾರೆ’ ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಆಕ್ರೋಶ ಹೊರ ಹಾಕಿದ್ದರು. “ಕಚ್ಚತೀವು ತಮಿಳುನಾಡು ಮತ್ತು ಶ್ರೀಲಂಕಾ ನಡುವಿನ ದ್ವೀಪವಾಗಿದೆ. ಅದನ್ನು ಯಾರೋ ಬೇರೆ ದೇಶಕ್ಕೆ ನೀಡಿದ್ದಾರೆ. ಇದು ಇಂದಿರಾಗಾಂಧಿ ನೇತೃತ್ವದಲ್ಲಿ ನಡೆದಿದೆ” ಎಂದು ಹೇಳಿದ್ದರು.