PM Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಆಸ್ತಿ. ಈ ದೇಶದ ಪರಿವಾರಕ್ಕೆ ಸೇರಿದವರು. ದೇಶವಾಸಿಗಳ ಆರಕ್ಷಕರು. ಅದಕ್ಕಾಗಿ ಜನರೇ ಮೋದಿಯವರಿಗೆ ಜೈಕಾರ ಕೂಗುತ್ತಿದ್ದಾರೆ. ಹೀಗಿರುವಾಗ ಅವರೆಲ್ಲರ ಕಪಾಳಕ್ಕೆ ಹೊಡೆಯುವ “ಶಕ್ತಿ” ನಿಮ್ಮ “ಕೈ”ಗಿದೆಯೇ? ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ, ಮಾರ್ಚ್ 25 : ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಬೆಂಬಲಿಸುವ ಯುವ ಪಡೆಗೆ ಕಪಾಳ ಮೋಕ್ಷ ಮಾಡುವ ಶಕ್ತಿ ತಮ್ಮ ಕೈಗೆ ಇದೆಯೇ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಾಂಗ್ರೆಸ್ ಹಾಗೂ ಸಚಿವ ಶಿವರಾಜ್ ತಂಗಡಗಿಗೆ (Shivaraj Thangadagi) ಪ್ರಶ್ನೆ ಮಾಡಿದ್ದಾರೆ.
ಮೋದಿ ಮೋದಿ ಎಂದು ಜೈಕಾರ ಹಾಕುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂಬ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವ ಪ್ರಲ್ಹಾದ್ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಆಸ್ತಿ. ಈ ದೇಶದ ಪರಿವಾರಕ್ಕೆ ಸೇರಿದವರು. ದೇಶವಾಸಿಗಳ ಆರಕ್ಷಕರು. ಅದಕ್ಕಾಗಿ ಜನರೇ ಮೋದಿಯವರಿಗೆ ಜೈಕಾರ ಕೂಗುತ್ತಿದ್ದಾರೆ. ಹೀಗಿರುವಾಗ ಅವರೆಲ್ಲರ ಕಪಾಳಕ್ಕೆ ಹೊಡೆಯುವ “ಶಕ್ತಿ” ನಿಮ್ಮ “ಕೈ”ಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರಿಗೆ ಜೈಕಾರ ಹಾಕುವವರ ಕಪಾಳಕ್ಕೆ ಹೊಡೆಯಬೇಕೆ? ಯಾವ ಕಾರಣಕ್ಕೆ? ಭಾರತದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಕ್ಕಾಗಿಯೇ? ಅಥವಾ ಜನರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಕ್ಕಾಗಿಯೇ? ಎಂದು ಪ್ರಲ್ಹಾದ್ ಜೋಶಿ ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಕಿಡಿಕಾರಿದ ಸಚಿವ ಜೋಶಿ
ದೇಶದ ಪ್ರಧಾನ ಮಂತ್ರಿಯನ್ನು ಹೇಗೆ ಗೌರವಿಸಬೇಕು ಎಂಬ ಕಿಂಚಿತ್ತೂ ಆಲೋಚನೆ, ಸೌಜನ್ಯ ಕಾಂಗ್ರೆಸ್ ನಾಯಕರಿಗೆ ಇಲ್ಲ. ತೀರಾ ಉಡಾಫೇ ಮಾತನಾಡುತ್ತಾರೆ. ಇವರ ಅಸಹನೀಯ ಪದ ಬಳಕೆಗೆ ಯುವ ಪಡೆಯೇ ಉತ್ತರ ಕೊಡವ ಕಾಲ ದೂರವಿಲ್ಲ ಎಂದು ಪ್ರಲ್ಹಾದ್ ಜೋಶಿ ಎಚ್ಚರಿಸಿದ್ದಾರೆ.