ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿವೈ ವಿಜಯೇಂದ್ರ ಅವರು ಇಂದು (ಮಾರ್ಚ್ 27) ಮೈಸೂರು-ಕೊಡಗು ಕ್ಷೇತ್ರಕ್ಕೆ ಭೇಟಿ ನೀಡಿ ಅಭ್ಯರ್ಥಿ ಯದುವೀರ್ ಪರ ಪ್ರಚಾರಕ್ಕಿಳಿದಿದ್ದಾರೆ. ಆದ್ರೆ, ಮಡಿಕೇರಿಯ ಕಾರ್ಯಕ್ರವೊಂದರಲ್ಲಿ ಖದೀಮರು ಬಿಜೆಪಿಯ ಇಬ್ಬರು ಮಾಜಿ ಶಾಸಕರ ಪರ್ಸ್ ಕಳ್ಳತನವಾಗಿರುವ ಘಟನೆ ನಡೆದಿದೆ.
ಮಡಿಕೇರಿ, ಮಾರ್ಜ್ – 27 : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayednra) ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮಡಿಕೇರಿ(Madikeri), ಕುಶಾಲನಗರ ಕಾರ್ಯಕ್ರಮದಲ್ಲಿ ಇಂದು (ಮಾರ್ಚ್ 27) ಖದೀಮರು ಅನೇಕರ ಪರ್ಸ್ (Purse theft) ಎಗರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆಜಿ ಬೋಪಯ್ಯ ಅವರ ಪರ್ಸ್ ಸಹ ಕಳ್ಳತನವಾಗಿದೆ. ಅಪ್ಪಚ್ಚು ರಂಜನ್ ಅವರ ಪರ್ಸ್ನಲ್ಲಿ 25000 ರೂ ಹಾಗೂ ಬೋಪಯ್ಯ ಅವರ ಪರ್ಸ್ನಲ್ಲಿ 17000 ರೂ. ಇತ್ತು. ಇವರಿಬ್ಬರ ಜೊತೆಗೆ ಇನ್ನೂ ಅನೇಕರ ಜೇಬಿನಲ್ಲಿದ್ದ ಪರ್ಸ್ ಕಳ್ಳತನವಾಗಿದ್ದು, ಒಟ್ಟು ಅಂದಾಜು 5 ಲಕ್ಷ ರೂ. ಅಧಿಕ ಹಣ ಲಪಟಾಯಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಯದುವೀರ್ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಬೇಕಂತಲೇ ನೂಕು ನುಗ್ಗಲು ಸೃಷ್ಟಿ ಹಲವರ ಪರ್ಸ್ ಎಗರಿಸಿದ್ದಾರೆ. ಮೊದಲೇ ಪ್ಲ್ಯಾನ್ ಮಾಡಿಕೊಂಡೇ ಹೊರ ಜಿಲ್ಲೆಯಿಂದ ಬಂದ ಕಳ್ಳರ ತಂಡ ಈ ಕೃತ್ಯ ಎಸಗಿದೆ ಎಂದು ಶಂಕಿಸಲಾಗಿದ್ದು, ಕಳ್ಳರ ಪತ್ತೆಗೆ ಮಡಿಕೇರಿ ನಗರ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.
ಇನ್ನು ರಾಜಕೀಯ ಕಾರ್ಯಕ್ರಮದಲ್ಲಿ ಈ ರೀತಿ ಕಳ್ಳತನವಾಗಿರುವುದು ಇದು ಮೊದಲೇನಲ್ಲ. ಈ ಹಿಂದೆ ಕರ್ನಾಟಕದಲ್ಲಿ ನಡೆದ ರಾಜಕೀಯ ಕಾರ್ಯಕ್ರಮಗಳಲ್ಲಿ ಈ ರೀತಿ ಪ್ರಕರಣಗಳು ಸಹ ನಡೆದ ಉದಾಹರಣೆಗಳು ಇವೆ. ಪರ್ಸ್ ಮಾತ್ರವಲ್ಲದೇ ಮೊಬೈಲ್ ಫೋನ್ಗಳನ್ನು ಸಹ ದೋಚಿರುವುದನ್ನು ಇಲ್ಲಿ ಸ್ಮರಿಸಬಹುದು. ಅದರಲ್ಲೂ ಈಗ ಲೋಕಸಭಾ ಚುನಾವಣೆ ಇರುವುದರಿಂದ ಕಳ್ಳರಿಗೆ ಹಬ್ಬವಿದ್ದಂತೆಯೇ. ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಕೈಗೆ ಸಿಕ್ಕವರ ಫೋನ್, ಪರ್ಸ್ ಎಗರಿಸುತ್ತಾರೆ.
ತಮ್ಮ-ತಮ್ಮ ನಾಯಕರನ್ನು ನೋಡಲು ಅಲ್ಲದೇ ಫೋಟೋ ಕ್ಲಿಕ್ಕಿಸಿಕೊಳ್ಳಲು ಕಾರ್ಯಕರ್ತರು ಮುಗಿಬೀಳುತ್ತಾರೆ. ಇದನ್ನೇ ಕಾಯುವ ಖದೀಮರು ಗುಂಪಿನೊಳಗೆ ಎಂಟ್ರಿ ಕೊಟ್ಟು ಬೇಕಂತಲೇ ನೂಕು ನುಗ್ಗಲು ಸೃಷ್ಟಿ ಜೇಬುಗಳಿಗೆ ಕೈ ಹಾಕಿ ಸಿಕ್ಕಿದ್ದನ್ನು ದೋಚಿ ಅಲ್ಲಿಂದ ಪರಾರಿಯಾಗುತ್ತಾರೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು, ಕಾರ್ಯಕರ್ತರು ಇಂತಹ ಖದೀಮರಿಂದ ಎಚ್ಚರಿಕೆಯಿಂದ ಇರುವುದು ಒಳಿತು.