ಶೀಘ್ರ ಲಾಭಕ್ಕೆ ಆಸೆಪಟ್ಟು ಹಣ ಕಳೆದುಕೊಂಡ ಯುವಕ: ಟ್ರೇಡ್ ಬ್ಯುಸಿನೆಸ್ ನೆಪದಲ್ಲಿ ಮೋಸ

ಅಂಕೋಲಾ: ಶೀಘ್ರವಾಗಿ ಅಲ್ಪಾವಧಿಯಲ್ಲಿ ಲಾಭ ಪಡೆಯುವ ಆಸೆಯಿಂದ ಆನ್ಲೈನ್ ಮೂಲಕ ಹಣ ಹೂಡಿಕೆ ಮಾಡಿದ ಯುವಕನೋರ್ವ ಹೂಡಿದ ಹಣವೂ ವಾಪಸ್ಸಾಗದೆ ಮೋಸ ಹೋದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ಪಟ್ಟಣದ ಹುಲಿದೇವರವಾಡದ ಮಹಮ್ಮದ್ ಗೌಸ್ ನೌಷಾದ್ ಶೇಕ್ ಮೋಸ ಹೋದ ಯುವಕ. Haaji_sultaana ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೆ. 19ರಂದು ಟ್ರೇಡ್ ಬ್ಯುಸಿನೆಸ್ ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ದೊರೆಯುತ್ತದೆ ಎನ್ನುವ ಪೋಸ್ಟ್ ಒಂದನ್ನು ಗಮನಿಸಿದ ಮಹಮ್ಮದ್ ಗೌಸ್ ಅದಕ್ಕೆ ಮರುಳಾಗಿ ಸಂದೇಶ ಕಳುಹಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ₹ 2000 ತೊಡಗಿಸಿದರೆ ಅರ್ಧ ಗಂಟೆಯಲ್ಲಿ ₹ 13,750 ಲಾಭ ದೊರೆಯುತ್ತದೆ ಎಂದು ಆಪಾದಿತ Haaji_sultaana ಇನ್ಸ್ಟಾಗ್ರಾಮ್ ಖಾತೆಯಿಂದ ಮರು ಸಂದೇಶ ಕಳುಹಿಸಿದ್ದಾನೆ.
ಇದನ್ನು ನಂಬಿದ ಗೌಸ್ ತಮ್ಮ ಗೂಗಲ್ ಪೇ ಆಪ್ ಮೂಲಕ ಅಪಾದಿತನ ಬ್ಯಾಂಕ್ ಆಫ್ ಬರೋಡ ಖಾತೆಗೆ ₹ 2000 ಹಣ ಪಾವತಿಸಿದ್ದಾರೆ. ನಂತರ ಲಾಭದ ಹಣದ ಬಗ್ಗೆ ಕೇಳಿದಾಗ ಜಿಎಸ್ ಟಿ ಶುಲ್ಕ ಎಂದು ₹ 5,750 ಹಾಗೂ ಲೇಟ್ ಪೇ ಚಾರ್ಜ್, ವರ್ಕಿಂಗ್ ಚಾರ್ಜ್ ಮತ್ತು ಮ್ಯಾನೇಜರ್ ಚಾರ್ಜ್ ನೀಡಿ ಎಂದು ಒಟ್ಟು 95,746 ರೂಪಾಯಿಗಳನ್ನು ಗೌಸ್ ನಿಂದ ಪಡೆಯಲಾಗಿದೆ. ಆದರೆ ಮರಳಿ ಹಣ ದೊರೆಯದೆ ಕಂಗಾಲಾದ ಯುವಕ ಅಂತಿಮವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಆನ್ಲೈನ್ ಮೂಲಕ ಹಣ ತೊಡಗಿಸಿ ಈಗಾಗಲೇ ಲಕ್ಷಾಂತರ ಜನರು ಮೋಸ ಹೋಗಿದ್ದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಸಾಗಬೇಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬ್ಯಾಂಕ ಖಾತೆಯ ಬಗ್ಗೆ ವಿವರಣೆ ದೊರೆತಿದ್ದು ಅದರ ಜಾಡು ಹಿಡಿದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.