IPL 2024: ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್ ಮಾತ್ರವಲ್ಲದೆ ತಂಡದ ಬೌಲಿಂಗ್ ಕೂಡ ಸುಧಾರಣೆ ಕಾಣಬೇಕು. ವಿಕೆಟ್ ಟೇಕರ್ ಬೌಲರ್ ಎನಿಸಕೊಂಡಿದ್ದ ಮೊಹಮ್ಮದ್ ಸಿರಾಜ್ ವಿಕೆಟ್ ಲೆಸ್ ಎನಿಸಿಕೊಳ್ಳುತ್ತಿದ್ದಾರೆ. ಅಲ್ಜಾರಿ ಜೋಸೆಫ್ ಪ್ರತಿ ಪಂದ್ಯದಲ್ಲಿಯೂ ದುಬಾರಿಯಾದರೂ ಕೂಡ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿರುವುದು ಕೂಡ ತಂಡ ಸೋಲಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಆರ್ಸಿಬಿಗೆ ಚೋಪ್ರಾ ಸಲಹೆ ನೀಡಿದ್ದಾರೆ.
ಮುಂಬೈ, ಮಾರ್ಚ್ – 31 : ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಮೂರು ಪಂದ್ಯಗಳನ್ನು ಆಡಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಕಳೆದ ಕೆಕೆಆರ್ ವಿರುದ್ಧದ ಸೋಲಿಗೆ(IPL 2024) ವಿರಾಟ್ ಕೊಹ್ಲಿಯ(Virat Kohli) ನಿಧಾನಗತಿಯ ಬ್ಯಾಟಿಂಗ್ ಪ್ರಮುಖ ಕಾರಣ ಎಂದು ಮಾಜಿ ಆಟಗಾರ ಆಕಾಶ್ ಚೋಪ್ರಾ(Aakash Chopra) ಹೇಳಿದ್ದಾರೆ.
ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧ 83 ರನ್ ಗಳಿಸಿದ್ದರೂ ಕೂಡ ಈ ಮೊತ್ತವನ್ನು ಪೇರಿಸಲು 59 ಎಸೆತಗಳನ್ನು ಎದುರಿಸಬೇಕಾಯಿತು. ಇದು ಟಿ20 ಕ್ರಿಕೆಟ್ನಲ್ಲಿ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಅದರಲ್ಲೂ ಆರಂಭಿನಾಗಿ ಕಣಕ್ಕಿಳಿದು ಇಷ್ಟು ನಿಧಾನಗತಿಯ ಬ್ಯಾಟಿಂಗ್ ನಡೆಸುವುದರಲ್ಲಿಯೂ ಅರ್ಥವಿಲ್ಲ. ಇವರ ನಿಧಾನ ಗತಿಯ ಬ್ಯಾಟಿಂಗ್ನಿಂದ ಉತ್ತಮವಾಗಿ ಬ್ಯಾಟ್ ಬೀಸುವ ದಿನೇಶ್ ಕಾರ್ತಿಕ್ ಮತ್ತು ಮಹಿಪಾಲ್ ಲೋಮ್ರೋರ್ ಅವರಿಗೆ ಹೆಚ್ಚಿನ ಎಸೆತಗಳು ಸಿಗುತ್ತಿಲ್ಲ. ಆದರೂ ಕೂಡ ಈ ಉಭಯ ಆಟಗಾರರು ಸಿಕ್ಕ ಒಂದೆಡರು ಎಸೆತಗಳಲ್ಲಿ ದೊಡ್ಡ ಮೊತ್ತ ಕಲೆಹಾಕಿ ತಂಡದ ಮೊತ್ತವನ್ನು ಹಿಗ್ಗಿಸುತ್ತಿದ್ದಾರೆ. ತಂಡದ ಸೋಲಿಗೆ ಕೊಹ್ಲಿಯ ಆಮೆ ಗತಿಯ ಬ್ಯಾಟಿಂಗೇ ಪ್ರಮುಖ ಕಾರಣ ಎಂದು ಆಕಾಶ್ ಚೋಪ್ರಾ ಅವರು ಕೊಹ್ಲಿ ಮೇಲೆ ನೇರ ಆರೋಪ ಹೊರಿಸಿದ್ದಾರೆ.
ಕೊಹ್ಲಿ ತಂಡಕ್ಕೆ ಆಸರೆಯಾಗುತ್ತಿರುವುದು ನಿಜ. ಆದರೆ ನಿಧಾನಗತಿಯ ಬ್ಯಾಟಿಂಗ್ ಸಲ್ಲದು. ಏಕದಿನ, ಟೆಸ್ಟ್ ಕ್ರಿಕೆಟ್ಗೆ ಈ ಪ್ರದರ್ಶನ ಓಕೆ. ಹೊಡಿಬಡಿ ಶೈಲಿಯ ಟಿ20ಗೆ ಇದು ಸಲ್ಲದು ಎನ್ನುವುದು ಆಕಾಶ್ ಚೋಪ್ರಾ ಅಭಿಪ್ರಾಯ. ಕಳೆದ ವರ್ಷದ ಆವೃತ್ತಿಯಲ್ಲಿ ಕೊಹ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಆದರೆ ಈ ಬಾರಿ ರನ್ ಗಳಿಸಿದರೂ ಕೂಡ ಇದಕ್ಕಾಗಿ ಹೆಚ್ಚಿನ ಎಸೆತಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೊಹ್ಲಿ ಮುಂದಿನ ಪಂದ್ಯಲ್ಲಿ ತಮ್ಮ ಬ್ಯಾಟಿಂಗ್ ಶೈಲಿಗೆ ಚುರುಕು ಮುಟ್ಟಿಸಿಬೇಕಿದೆ.