ಉಡುಪಿ: ಗಂಡ-ಹೆಂಡತಿ ನಡುವೆ ಜಗಳ; ಮಹಿಳಾ ಪೇದೆ ಆತ್ಮಹತ್ಯೆಗೆ ಶರಣು

ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದ ಸರಕಾರಿ ನೌಕರರು. ಪತ್ನಿ ಪೊಲೀಸ್ ಇಲಾಖೆಯ ಸಿಬ್ಬಂದಿ. ಗಂಡ ಕೆಎಸ್ಆರ್​ಟಿಸಿ ಡಿಪೋದಲ್ಲಿ ಸೀನಿಯರ್ ಮೆಕ್ಯಾನಿಕ್. ಅವರಿಬ್ಬರ ಸುಂದರ ಕುಟುಂಬದಲ್ಲಿ ಸಣ್ಣ ವಿಚಾರಕ್ಕೆ ಜಗಳ ನಡೆದಿದೆ. ಇದರಿಂದ ಮನನೊಂದ ಮಹಿಳಾ ಪೊಲೀಸ್ ಸಿಬ್ಬಂದಿ ನೇಣಿಗೆ ಶರಣಾಗಿದ್ದಾರೆ.

ಉಡುಪಿ, ಮಾರ್ಚ್‌ – 31 : ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ವೊಬ್ಬರು (ಮಾ.29) ರಾತ್ರಿ ಕಾಪು ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜ್ಯೋತಿ ಮೃತ ರ್ದುದೈವಿ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 2021 ಬ್ಯಾಚ್​ನಲ್ಲಿ ಪಾಸ್ ಆಗಿ ಇಲಾಖೆಗೆ ಸೇರಿದವರು. ಜ್ಯೋತಿ ಅವರ ಪತಿ ರವಿಕುಮಾರ್, ಉಡುಪಿಯಲ್ಲಿ ಕೆಎಸ್​ಆರ್​​ಟಿಸಿ ಮೆಕ್ಯಾನಿಕ್. ಜ್ಯೋತಿ ಮತ್ತು ರವಿಕುಮಾರ್ ಇಬ್ಬರದ್ದು 10 ವರ್ಷದ ಪ್ರೀತಿ. ಆರು ವರ್ಷದ ಹಿಂದೆ ಮದುವೆಯಾಗಿದ್ದರು. ಕಾಲೇಜು ಪ್ರೊಫೆಸರ್ ಆಗಿದ್ದ ರವಿಕುಮಾರ್, ಕೆಲ ತಿಂಗಳ ಹಿಂದೆ ಕೆ ಎಸ್ ಆರ್ ಟಿಸಿ ಡಿಪೋ ಅಸಿಸ್ಟೆಂಟ್ ಮೆಕ್ಯಾನಿಕ್ ಆಗಿ ಆಯ್ಕೆಯಾಗಿದ್ದಾರೆ.

ಗಂಡ-ಹೆಂಡತಿ ನಡುವೆ ಜಗಳ
ಇನ್ನು ಉಡುಪಿಯಲ್ಲೇ ಕೆಲಸಕ್ಕೆ ಸೇರಿ ಜೊತೆಗಿದ್ದರು. ಇತ್ತೀಚಿನ ಕೆಲ ತಿಂಗಳಿಂದ ಗಂಡ-ಹೆಂಡತಿ ನಡುವೆ ಸಣ್ಣಪುಟ್ಟ ವಿಚಾರದಲ್ಲಿ ಮನಸ್ತಾಪವಾಗಿತ್ತು. ಕಳೆದ ರಾತ್ರಿ ಇಬ್ಬರ ನಡುವೆ ದೊಡ್ಡ ಮಟ್ಟದಲ್ಲಿ ಜಗಳವಾಗಿತ್ತು ಎಂದು ಅಕ್ಕ-ಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತಿ ಮನೆಯ ಹಾಲ್​ನಲ್ಲಿ ಮಲಗಿದ್ದು, ಪತ್ನಿ ಜ್ಯೋತಿ ತಾನಿದ್ದ ರೂಮ್​​ಗೆ ಚಿಲಕ ಹಾಕಿಕೊಂಡಿದ್ದರು. ಬೆಳಗ್ಗೆ ಬಾಗಿಲು ತೆಗೆಯದೆ ಇದ್ದದ್ದನ್ನು ಕಂಡು ಸಂಶಯಗೊಂಡು, ಪತಿ ಪರಿಶೀಲನೆ ಮಾಡಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ವಿಷಯ ತಿಳಿದು ಉಡುಪಿ ಎಸ್​ಪಿ ಡಾ. ಅರುಣ್, ಕಾಪು ತಹಶೀಲ್ದಾರ್ ಪ್ರತಿಭಾ, ಎಎಸ್​ಪಿ ಸಿದ್ಧಲಿಂಗಪ್ಪ ಘಟನಾ ಸ್ಥಳಕ್ಕಾಗಮಿಸಿ ಮಾಹಿತಿ ಕಲೆಹಾಕಿದ್ದಾರೆ. ತನಿಖಾ ಪ್ರಕ್ರಿಯೆಗಳಿಗೆ ಸೂಚನೆ ನೀಡಿದ್ದು, ಈ ಕುರಿತು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ್ಯೋತಿ ಫೋನ್ ಬಳಕೆ ಮಾಡುವ ಕುರಿತಂತೆ ರವಿಕುಮಾರ್ ತಗಾದೆ ತೆಗೆಯುತ್ತಿದ್ದರು. ಅದೇ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಾಗಲಕೋಟೆಯಿಂದ ಜ್ಯೋತಿ ಕುಟುಂಬ ಕಾಪುವಿಗೆ ಹೊರಟಿದೆ. ಕುಟುಂಬದ ಸದಸ್ಯರು ಬಂದ ನಂತರ ಮೃತ ದೇಹದ ಮಹಜರು, ಮರಣೋತ್ತರ ಪ್ರಕ್ರಿಯೆ ನಡೆಯಲಿದೆ.