ಸಂದರ್ಶನದಲ್ಲಿ ಮಾತನಾಡಿದ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಯಾವುದೇ ಅನುಮಾನ ಬೇಡ, ಈ ಬಾರಿ RCB ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು, ಮಾರ್ಚ್ 21 : 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿ ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಉಳಿದಿದೆ. ಶುಕ್ರವಾರ ನಡೆಯುವ ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ(RCB) ಮತ್ತು ಸಿಎಸ್ಕೆ(CSK) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಹಲವು ಕ್ರಿಕೆಟ್ ಪಂಡಿತರು ಈ ಬಾರಿ ಯಾವ ತಂಡ ಟ್ರೋಫಿ (IPL 2024 Trophy) ಗೆಲ್ಲಲಿದೆ ಎಂದು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಈ ಸಾಲಿಗೆ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್(AB de Villiers) ಕೂಡ ಸೇರ್ಪಡೆಯಾಗಿದ್ದಾರೆ.
ನ್ಯೂಸ್ 18 ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಎಬಿಡಿ, ಯಾವುದೇ ಅನುಮಾನ ಬೇಡ ಈ ಸಲ ಕಪ್ ನಮ್ದೇ… ಈ ಬಾರಿ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸ್ಮೃತಿ ಮಂಧಾನಾ ನೇತೃತ್ವದ ಮಹಿಳಾ ಆರ್‌ಸಿಬಿ ಚೊಚ್ಚಲ ಪ್ರಶಸ್ತಿ ಗೆದ್ದಿದೆ. ಇದೇ ಹುರುಪಿನಲ್ಲಿರುವ ಪುರುಷರ ತಂಡವೂ ಕೂಡ ಕಪ್ ಗೆಲ್ಲಲೇ ಬೇಕೆನ್ನುವ ಹಠಕ್ಕೆ ಬಿದ್ದಿದೆ ಎಂದರು.
ಎಬಿಡಿ ಭವಿಷ್ಯ ನಿಜವಾಗುವು ಖಚಿತ!
ಎಬಿಡಿ ವಿಲಿಯರ್ಸ್ ಭವಿಷ್ಯ ಕೇಳಿ ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಏಕೆಂದರೆ ಎಬಿಡಿ ಈ ಹಿಂದೆ ಹೇಳಿದ ಹಲವು ಭವಿಷ್ಯಗಳು ನಿಜವಾಗಿದೆ. 2022ರಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಎಬಿಡಿ ಹೇಳಿದ್ದರು. ಅದರಂತೆ ಪಾಂಡ್ಯ ಕಪ್ ಗೆದ್ದಿದ್ದರು. ಕಳೆದ ವರ್ಷ ಕೂಡ ಗುಜರಾತ್ ಫೈನಲ್ ತಲುಪಲಿದೆ ಎಂದು ಹೇಳಿದ್ದರು. ಇದು ಕೂಡ ನಿಜವಾಗಿತ್ತು. ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿದೆ ಎಂದಿದ್ದಾರೆ. ಅವರ ಭವಿಷ್ಯ ನಿಜವಾಗಲಿದೆಯಾ? ಎಂದು ಕಾದು ನೋಡಬೇಕಿದೆ.
“ನನ್ನ ಹೃದಯವು ಆರ್ಸಿಬಿಯೊಂದಿಗೆ ಇದೆ. ಅಲ್ಲಿ ಅನೇಕ ವರ್ಷ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ನನಗೆ ಉತ್ತಮ ಸಂಪರ್ಕವಿದೆ. ಅವರು ಅಪಾರ ಪ್ರೀತಿ ತೋರುತ್ತಾರೆ ಎಂದು ಎಬಿ ಡಿವಿಲಿಯರ್ಸ್ ಇಂಡಿಯಾ ಟುಡೇಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು. ಮಿಸ್ಟರ್ 360 ಡಿಗ್ರಿ ಖ್ಯಾತಿಯ ಬ್ಯಾಟರ್, ಎಬಿಡಿ ಅವರು 184 ಐಪಿಎಲ್ ಪಂದ್ಯಗಳನ್ನಾಡಿ 3 ಶತಕ ಹಾಗೂ 40 ಅರ್ಧಶತಕಗಳ ನೆರವಿನಿಂದ 151.69 ಸ್ಟ್ರೆಕ್ ರೇಟ್‌ನಲ್ಲಿ 5,162 ರನ್ ಸಿಡಿಸಿದ್ದಾರೆ. 40 ವರ್ಷದ ಎಬಿಡಿ ಈ ಬಾರಿ ಕಾಮೆಂಟ್ರಿ ಮಾತ್ರವಲ್ಲದೆ, ಆರ್‌ಸಿಬಿ ಬ್ಯಾಟರ್‌ಗಳಿಗೆ ಮಾರ್ಗದರ್ಶನ ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.