PBKS v DC: ಡೆಲ್ಲಿ ಕ್ಯಾಪಿಟಲ್ಸ್(PBKS v DC) ಎದುರಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 4 ವಿಕೆಟ್ಗಳ ಗೆಲುವು ದಾಖಲಿಸಿದೆ.
ಚಂಡೀಗಢ, ಮಾರ್ಚ್ 23 : ಸ್ಯಾಮ್ ಕರನ್(63) ಮತ್ತು ಲಿವಿಂಗ್ಸ್ಟೋನ್(38*) ಪ್ರಚಂಡ ಬ್ಯಾಟಿಂಗ್ ಸಾಹಸದಿಂದ ಡೆಲ್ಲಿ ಕ್ಯಾಪಿಟಲ್ಸ್(PBKS v DC) ಎದುರಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 4 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್ನಲ್ಲಿ(IPL 2024) ತಾನಾಡಿದ ಮೊದಲ ಪಂದ್ಯದಲ್ಲೇ ಗೆಲುವಿನ ಶುಭಾರಂಭ ಕಂಡಿದೆ.
ಇಲ್ಲಿನ ಮುಲ್ಲಾನ್ಪುರ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಇಂಪ್ಯಾಕ್ಟ್ ಪ್ಲೇಯರ್ ಅಭಿಷೇಕ್ ಪೊರೆಲ್ ಅವರ ವಿಸ್ಫೋಟಕ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ಗೆ 174 ರನ್ ಬಾರಿಸಿತು. ಜಬಾಬಿತ್ತ ಪಂಜಾಬ್ ಕಿಂಗ್ಸ್(Punjab Kings) ಸ್ಯಾಮ್ ಕರನ್ ಅವರ ಅರ್ಧಶತಕದ ಹೋರಾಟದಿಂದ 19.2 ಓವರ್ನಲ್ಲಿ 6 ವಿಕೆಟ್ಗೆ 177 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಚೇಸಿಂಗ್ ವೇಳೆ ನಾಯಕ ಶಿಖರ್ ಧವನ್ ಮತ್ತು ಜಾನಿ ಬೇರ್ಸ್ಟೋ ಪಂಜಾಬ್ಗೆ ಉತ್ತಮ ಆರಂಭ ನೀಡಿದರು. ಖಲೀಲ್ ಅಹ್ಮದ್ ಎಸೆದ ಮೊದಲ ಓವರ್ನಲ್ಲಿಯೇ 17 ರನ್ ಕಲೆಹಾಕಿದರು. ಮುಂದಿನ 2 ಓವರ್ನಲ್ಲಿಯೂ ಉತ್ತಮ ರನ್ ಹರಿದು ಬಂತು. ಮೂರು ಓವರ್ಗೆ ವಿಕೆಟ್ ನಷ್ಟವಿಲ್ಲದೆ 34 ರನ್ ಒಟ್ಟುಗೂಡಿತು. ಆದರೆ ನಾಲ್ಕನೇ ಓವರ್ನ ಮೊದಲ ಎಸೆತದಲ್ಲೇ ಜಾನಿ ಬೇರ್ಸ್ಟೋ(9) ವಿಕೆಟ್ ಪತನಗೊಂಡಿತು. ಶಿಖರ್ ಧವನ್(22) ಮತ್ತು ಪ್ರಭಾಸಿಮ್ರಾನ್ ಸಿಂಗ್(26) ಸತತವಾಗಿ ವಿಕೆಟ್ ಕಳೆದುಕೊಂಡಾಗ ಪಂಜಾಬ್ಗೆ ಕೊಂಚ ಸಂಕಷ್ಟಕ್ಕೆ ಸಿಲುಕಿತು.
ಕರನ್ ಅರ್ಧಶತಕ
84 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರನ್ ಜವಾಬ್ದಾರಿಯುತ ಆಟವಾಡಿ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಇಂಗ್ಲೆಂಡ್ನವರೇ ಆದ ಲಿಯಾಮ್ ಲಿವಿಂಗ್ಸ್ಟೋನ್ ಉತ್ತಮ ಸಾಥ್ ನೀಡಿದರು. ಉಭಯ ಆಟಗಾರರು ಸೇರಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಿದರು. ಕರನ್ 47 ಎಸೆತಗಳಿಂದ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 63 ರನ್ ಬಾರಿಸಿದರು. ಲಿವಿಂಗ್ಸ್ಟೋನ್ ಅಜೇಯ 38 ರನ್ ಗಳಿಸಿದರು. ಅವರ ಈ ಬಿರುಸಿನ ಇನಿಂಗ್ಸ್ನಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ದಾಖಲಾಯಿತು.
ಹರ್ಷಲ್ಗೆ ಚಳಿ ಬಿಡಿಸಿದ ಅಭಿಷೇಕ್
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಅಭಿಷೇಕ್ ಪೊರೆಲ್ ಬಿರುಸಿನ ಬ್ಯಾಟಿಂಗ್ ಮೂಲಕ ಪಂಜಾಬ್ ಬೌಲರ್ಗಳ ಬೆವರಿಳಿಸಿದರು. ಅದರಲ್ಲೂ ಹರ್ಷಲ್ ಪಟೇಲ್ ಅವರ ಅಂತಿಮ ಓವರ್ನಲ್ಲಿ 2 ಸಿಕ್ಸರ್ ಮತ್ತು ಮೂರು ಬೌಂಡರಿ ಬಾರಿಸಿ 24 ರನ್ ಕಸಿದರು. ಒಂದು ವೈಡ್ ಸೇರಿ ಈ ಓವರ್ನಲ್ಲಿ 25 ರನ್ ಹರಿದುಬಂತು. ಅಭಿಷೇಕ್ ಪಂಜಾಬ್ ಪಾಲಿಗೆ ದೊಡ್ಡ ಇಂಪ್ಯಾಕ್ಟ್ ಆದರು. ಕೇವಲ 10 ಎಸೆತಗಳಿಂದ 32 ರನ್ ಬಾರಿಸಿ ಅಜೇಯರಾಗಿ ಉಳಿದರು. ಆದರೆ ಪಂದ್ಯ ಸೋತ ಕಾರಣ ಇವರ ಬ್ಯಾಟಿಂಗ್ ಪ್ರದರ್ಶನ ವ್ಯರ್ಥವಾಯಿತು.
ಕಾರು ಅಪಘಾತಕ್ಕೆ ಒಳಗಾಗಿ 15 ತಿಂಗಳ ಬಳಿಕ ಐಪಿಎಲ್(IPL 2024) ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದ ರಿಷಭ್ ಪಂತ್(Rishabh Pant) 2 ಬೌಂಡರಿ ಬಾರಿಸಿ 18 ರನ್ ಗಳಿಸಿದರು. ಪಂತ್ ಮೈದಾನಕ್ಕೆ ಬರುವ ವೇಳೆ ನೆರದಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ವೆಲ್ಕಮ್ ಮಾಡಿದರು. ಆಸ್ಟ್ರೇಲಿಯಾದ ಬ್ಯಾಟರ್ಗಳಾದ ಡೇವಿಡ್ ವಾರ್ನರ್(29) ಮತ್ತು ಶಾನ್ ಮಾರ್ಷ್(20) ಮೊದಲ ವಿಕೆಟ್ಗೆ 39 ರನ್ ಒಟ್ಟುಗೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶೈ ಹೋಪ್ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 33 ರನ್ ಕಲೆಹಾಕಿದರು. ಇವರದ್ದೇ ಡೆಲ್ಲಿ ಪರ ಅತ್ಯಧಿಕ ಗಳಿಗೆ. ಪಂಜಾಬ್ ಪರ ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್ ಮತ್ತು ಅರ್ಶ್ದೀಪ್ ಸಿಂಗ್ ತಲಾ 2 ವಿಕೆಟ್ ಕಿತ್ತರು. ಹರ್ಷಲ್ ಪಟೇಲ್ ವಿಕೆಟ್ ಕಿತ್ತರೂ ಕೂಡ ದುಬಾರಿ ಎನಿಸಿಕೊಂಡರು.