ಸುಮಲತಾಗೆ ಕೈತಪ್ಪಿದ ಮಂಡ್ಯ ಬಿಜೆಪಿ ಟಿಕೆಟ್: ಪಕ್ಷೇತರವಾಗಿ ಸ್ಪರ್ಧಿಸಿ ಎಂದ ಆಪ್ತರು

ಲೋಕಸಮರಕ್ಕೆ ಈಗಾಗಲೇ ಮಹೂರ್ತ ಫಿಕ್ಸ್ ಆಗಿದೆ. ಈ ನಡುವೆ ಸಕ್ಕರಿನಗರಿ ಮಂಡ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೈತ್ರಿ ಟಿಕೆಟ್ ಜೆಡಿಎಸ್​​ಗೆ ಫಿಕ್ಸ್ ಎನ್ನಲಾಗುತ್ತಿದೆ. ಈ ಮಧ್ಯೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ಗೆ ಟಿಕೆಟ್ ಸಿಗದ ಹಿನ್ನೆಲೆ ಅವರ ಆಪ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯ, ಮಾರ್ಚ್​ 23: ಲೋಕಸಮರಕ್ಕೆ (Lok Sabha Elections) ಈಗಾಗಲೇ ಮಹೂರ್ತ ಫಿಕ್ಸ್ ಆಗಿದೆ. ಈ ನಡುವೆ ಸಕ್ಕರಿನಗರಿ ಮಂಡ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೈತ್ರಿ ಟಿಕೆಟ್ ಜೆಡಿಎಸ್​​ಗೆ ಫಿಕ್ಸ್ ಎನ್ನಲಾಗುತ್ತಿದೆ. ಮೈತ್ರಿ ಟಿಕೆಟ್ ಜೆಡಿಎಸ್​​ಗೆ ಎಂದು ಬಿಜೆಪಿ ಕೂಡ ಸ್ವಷ್ಟಪಡಿಸಿದೆ. ಆದರೆ ಅಧಿಕೃತ ಘೋಷಣೆ ಆಗಿಲ್ಲ. ಈ ಮಧ್ಯೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ಗೆ ಟಿಕೆಟ್ ಸಿಗದ ಹಿನ್ನೆಲೆ ಅವರ ಆಪ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸದೆ ಆಪ್ತ ಹನಕೆರೆ ಶಶಿ ಹೇಳಿದ್ದಿಷ್ಟು
ಸಂಸದೆ ಆಪ್ತ ಹನಕೆರೆ ಶಶಿ ಮಾಧ್ಯಮದವರೊಂದಿಗೆ ಮಾತನಾಡಿ, ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ಯಾಕೆ ಟಿಕೆಟ್ ಸಿಕ್ಕಿಲ್ಲವೋ ಗೊತ್ತಿಲ್ಲ. ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಬೇಕು. ಈ ನಿಟ್ಟಿನಲ್ಲಿ ಮೂರು ದಿನಗಳಲ್ಲಿ ಸಭೆ ಮಾಡುತ್ತೇವೆ. ಅಲ್ಲಿಯೇ ಸುಮಲತಾ ಅವರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.

ಮುಂದಿನ ರಾಜಕೀಯ ಜೀವನ ಮಂಡ್ಯದಲ್ಲಿ. ಹೀಗಾಗಿ ಮಂಡ್ಯದಿಂದ ಸ್ವರ್ಧೆ ಮಾಡಬೇಕು. ಅವರನ್ನೇ ನಂಬಿರುವ ಮತದಾರರ ನಿರ್ಧಾರ ತೆಗೆದುಕೊಳ್ಳಬೇಕು. ಅವರಿಗಾಗಿ ಅಲ್ಲದೆ ಇದ್ದರು ಮಂಡ್ಯದ ಜನರಿಗಾಗಿ ಸ್ವರ್ಧೆ ಮಾಡಬೇಕು ಎಂದಿದ್ದಾರೆ.

ಬಿಜೆಪಿ ಹೈಕಮಾಂಡ್ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್​​ಗೆ ಬಿಟ್ಟು ಕೊಟ್ಟಿದೆ. ಜೆಡಿಎಸ್ ಪ್ರಾಬಲ್ಯವಿರುವ ಈ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನೇ ನಿಲ್ಲಿಸಲು ಹಸಿರು ನಿಶಾನೆ ತೋರಿಸಿದೆ. ವಿಪರ್ಯಾಸವೆಂದರೆ ಈವರೆಗೂ ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ಗೆ ಇದರಿಂದಾಗಿ ಬಿಗ್ ಶಾಕ್ ಉಂಟಾಗಿತ್ತು. ಸುಮಲತಾ ಬಿಜೆಪಿ ಟಿಕೆಟ್ ನನಗೇ ಸಿಗುತ್ತದೆ. ಕಮಲದ ಚಿಹ್ನೆ ಉಳಿಸುವುದೇ ನನ್ನ ಗುರಿ. ನಾನೇ ಅಭ್ಯರ್ಥಿ ಅಂತ ಹೇಳಿದ್ದರು.

ಅಲ್ಲದೆ, ಅವರ ಅಭಿಮಾನಿಗಳೂ ಕೂಡ ಮಂಡ್ಯದಿಂದ ಸುಮಲತಾ ಸ್ಪರ್ಧೆ ಖಚಿತ ಎಂದು ಹೇಳಿದ್ದರು. ಆದರೆ ಈಗ ಬಿಜೆಪಿ ಹೈಕಮಾಂಡ್ ಮೂರು ಕ್ಷೇತ್ರಗಳನ್ನು ಜೆಡಿಎಸ್​ಗೆ ಕೊಟ್ಟಿರುವುದು ಸುಮಲತಾಗೆ ನುಂಗಲಾರದ ತುತ್ತಾಗಿದೆ. ಆಶ್ಚರ್ಯವೆಂದರೆ ಹಾವು-ಮುಂಗುಸಿ ತರ ಕಿತ್ತಾಡುತ್ತಿದ್ದ ಸುಮಲತಾ ಮತ್ತು ಜೆಡಿಎಸ್ಸಿಗರು ಮುಂದೆ ಒಂದಾಗುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.

ಇತ್ತೀಚೆಗೆ ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ನಡೆದಾಗ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅವರು ನನ್ನ ಅಕ್ಕ ಇದ್ದಾಗೆ ಎಂದು ಮೂಲಕ ಸುಮಲತಾರನ್ನ ಓಲೈಸಿಕೊಳ್ಳಲು ಮುಂದಾಗಿದ್ದರು. ಆದರೆ ಸುಮಲತಾ ಅವರು ಈವರೆಗೂ ತಮ್ಮ ಮುಂದಿನ ನಡೆ ಏನು ಎಂಬುದನ್ನು ತಿಳಿಸಿಲ್ಲ.