ನಮ್ಗೆ ಗಂಡಸ್ರ ಮೇಲೆ ನಂಬಿಕೆ ಇಲ್ಲ, ಹಾಗಾಗಿ 2000 ರೂ. ಹೆಣ್ಮಕ್ಕಳಿಗೆ ಕೊಡ್ತಿದ್ದೇವೆ ಎಂದ ಡಿಕೆಶಿ

DK Shivakumar : ಕಾಂಗ್ರೆಸ್‌ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 2000 ರೂ.ಯನ್ನು ಮಹಿಳೆಯರ ಕೈಗೆ ಕೊಟ್ಟಿದ್ದು ಯಾಕೆ ಎಂಬುದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿವರಣೆ ನೀಡಿದ್ದಾರೆ.

ಬೆಂಗಳೂರು, ಮಾರ್ಚ್‌ 23 : ನಮಗೆ ಮಹಿಳೆಯರ ಮೇಲೆ ತುಂಬಾ ನಂಬಿಕೆ ಇದೆ. ಅದೇ ಕಾರಣಕ್ಕೆ ಮಹಿಳೆಯರ ಖಾತೆಗೆ ಎರಡು ಸಾವಿರ ಹಣವನ್ನು ನೇರವಾಗಿ ಹಾಕುತ್ತಿದ್ದೇವೆ. ಗಂಡಸರಿಗೆ ಹಣ ಹಾಕಿದ್ರೆ ನೀವು ವೈನ್ ಶಾಪ್‌ಗೆ ಹೋಗ್ತೀರಿ. ಅದಕ್ಕೇ ಮಹಿಳೆಯರಿಗೆ ಕೊಡೋದು. ಹೀಗೆಂದು ಮಹಿಳೆಯರಿಗೆ ಕೊಟ್ಟಿರುವ ಗ್ಯಾರಂಟಿಗೆ ಕಾರಣ ಕೊಟ್ಟಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್‌.

ಶನಿವಾರ ಬೆಂಗಳೂರಿನಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ರಾಯಭಾರಿಗಳು ನೀವು ಎಂದು ಹೇಳಿದರು.

ʻʻನಾವು ಜನರಿಗೆ ‌ ಗ್ಯಾರಂಟಿ ಯೋಜನೆಗಳ ಮೂಲಕ ಶಕ್ತಿ ಕೊಟ್ಟಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ಈಗ ನೀವೆಲ್ಲಾ ಏನು ಮಾಡಬೇಕು ಹೇಳಿʼʼ ಎಂದು ಹೇಳುತ್ತಾ ಡಿ.ಕೆ.‌ ಶಿವಕುಮಾರ್‌ ಎಲ್ಲರ ಗಮನ ಸೆಳೆದರು. ಆಗ ಎಲ್ಲರೂ ಒಟ್ಟಾಗಿ ವೋಟ್‌ ಮಾಡಬೇಕು ಎಂದರು.

ಆಗ ಡಿ.ಕೆ.ಶಿವಕುಮಾರ್‌ ಸಿಟ್ಟಾಗಿ, ಓ ವೋಟ್‌ ಗೀಟ್‌ ಏನೂ ಅಲ್ಲ.. ನೀವು ಎಲ್ಲ ಕೈಯಿಂದ ವೋಟು ಹಾಕಿಸಬೇಕು ಎಂದರು. ʻʻಮೊದಲು ನೀವೆಲ್ಲಾ ತಂಡಗಳನ್ನಾಗಿ ಮಾಡಿಕೊಳ್ಳಬೇಕು. ಪ್ರತಿ ಮನೆ ಮನೆಗೆ ಹೋಗಬೇಕು. ಸ್ವಾಭಿಮಾನ ಬಿಟ್ಟು ಜನರ ಮನೆ ಬಳಿಗೆ ಹೋಗಬೇಕು. ನಾವು ಮೊದಲು ಕಾರ್ಯಕರ್ತರು. ನಮ್ಮ ಪಕ್ಷದ ಬಾವುಟವನ್ನು ನಾವಲ್ಲದೆ, ಬಿಜೆಪಿ, ಜೆಡಿಎಸ್ ನವರು ಹಾಕಲು ಸಾಧ್ಯವಾ? ಎಲ್ಲರೂ ಎರಡೆರಡು ಬೂತ್ ಜವಾಬ್ದಾರಿ ಹೊತ್ತು‌ ಕೆಲಸ ಮಾಡಿ. ಪಂಚ ಗ್ಯಾರಂಟಿಯೊಂದಿಗೆ ಮನಗಳಿಗೆ ತೆರಳಿ ಎಂದು ಹೇಳಿದರು.