ಕಾರವಾರ: ಸಾಮಾನ್ಯವಾಗಿ ಮಣ್ಣಿನಿಂದ ತಯಾರಿಸುವ ಗುಮ್ಮಟೆ ವಾದ್ಯವನ್ನು ಇಲ್ಲೊಬ್ಬರು ಒಣಗಿದ ಮರದ ಒಂದೇ ದಿಮ್ಮಿಯನ್ನು ಬಳಸಿ ತಯಾರಿಸಿದ್ದು ಗಮನ ಸೆಳೆಯುತ್ತಿದೆ. ಹೌದು! ಕಾರವಾರ ತಾಲೂಕಿನ ಅಮದಳ್ಳಿಯ ಜಾನಪದ ಕಲಾವಿದರು, ರೈತರೂ ಆಗಿರುವ ರಾಮಚಂದ್ರ ಬಂಟಾ ಗೌಡ ತಯಾರಿಸಿದ ಮರದ ಒಣತುಂಡಿನ ಗುಮ್ಮಟೆ ವಾದ್ಯ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಉತ್ತರ ಕನ್ನಡ ಜಿಲ್ಲೆ ಜಾನಪದ ಕಲಾ ಪ್ರಕಾರಗಳ ತವರೂರು ಎಂದೇ ಗುರುತಿಸಿಕೊಂಡಿದೆ. ಇಂತಹ ಜನಾಂಗಗಳಲ್ಲಿ ಹಾಲಕ್ಕಿ ಬುಡಕಟ್ಟು ಜನಾಂಗವೂ ಒಂದು. ಹಾಲಕ್ಕಿಗಳಲ್ಲಿ ಮುಖ್ಯ ಜಾನಪದ ವಾದ್ಯವೆಂದರೆ ಅದು ಗುಮ್ಮಟೆ ಪಾಂಗ್. ಸುಗ್ಗಿ ಕುಣಿತ, ಗುಮ್ಮಟೆ ಹಾಡು ಸೇರಿದಂತೆ ವಿವಿಧ ಜಾನಪದ ಕಾರ್ಯಕ್ರಮಗಳಿಗೆ ಗುಮ್ಮಟೆ ಪಾಂಗ್ ಬಹುಮುಖ್ಯ ವಾದ್ಯವಾಗಿದೆ.
ಮಡಕೆಯಂತೆಯೇ ಸುಮಾರು 4-5 ಅಡಿ ಉದ್ದವಾಗಿರುವ ಮಣ್ಣಿನಿಂದ ತಯಾರಿಸಿದ ಗುಮ್ಮಟೆಯ ಒಂದು ಬದಿ ಚಿಕ್ಕ ಬಾಯಿ ಇದ್ದರೆ ಇನ್ನೊಂದೆಡೆ ದೊಡ್ಡ ಬಾಯಿ ಇರುತ್ತದೆ. ದೊಡ್ಡ ಬಾಯಿ ಇರುವ ಕಡೆ ವಾದ್ಯಗಳಿಗೆ ಬಳಸುವ ಚರ್ಮವನ್ನು ಕಟ್ಟಿಕೊಂಡು ಬಾರಿಸಲಾಗುತ್ತದೆ. ಇದರಿಂದ ಹೊರಡುವ ನಾದವು ಸುಶ್ರಾವ್ಯವಾಗಿರುತ್ತದೆ. ಇದನ್ನು ಬಳಸಿ ಹಾಲಕ್ಕಿಗಳು ತಮ್ಮ ಗ್ರಾಮ್ಯ ಭಾಷೆಯಲ್ಲಿ ರಾಮಾಯಣ, ಮಹಾಭಾರತ ಮೊದಲಾದ ಕಥೆಯನ್ನಾಧರಿಸಿ ಗುಮ್ಮಟೆ ಪಾಂಗ್ ಬಾರಿಸುವ ಹಾಲಕ್ಕಿಗಳ ಸಂಪ್ರದಾಯ ಇಂದಿಗೂ ಜೀವಂತ ಇದೆ.
ಮೊದಲಿನಿಂದಲೂ ಈ ವಾದ್ಯವನ್ನು ಮಣ್ಣಿನಿಂದಲೇ ತಯಾರಿಸುವುದು ಸಾಮಾನ್ಯವಾಗಿದ್ದದರೆ ಕೆಲವೊಮ್ಮೆ ಅನುಕೂಲಸ್ಥರು ತಾಮ್ರದ ಗುಮ್ಮಟೆಯನ್ನು ತಯಾರಿಸಿದ ನಿದರ್ಶನವಿದೆ. ಆದರೆ ಒಣ ಕಟ್ಟಿಗೆಯಿಂದ ತಯಾರಿಸಿರುವುದು ತೀರಾ ಕಡಿಮೆ. ಇದೀಗ ಹೊಸ ಸಾಹಸಕ್ಕೆ ಮುಂದಾದ ರಾಮಚಂದ್ರ ಗೌಡ ಅವರು ತಮಗೆ ದೊರೆತ ಉತ್ತಮವಾದ ಒಂದು ಮರದ ಒಣ ದಿಮ್ಮಿಯನ್ನು ಗುಮ್ಮಟೆ ತಯಾರಿಸಲು ಬಳಸಿಕೊಂಡಿದ್ದಾರೆ. ರೈತಾಪಿ ಕುಟುಂಬದವರಾದ ಇವರು ಹಾಲಕ್ಕಿಗಳ ಸುಗ್ಗಿ ಕುಣಿತ, ಗುಮ್ಮಟೆ ಹಾಡು, ಪಗಡೆ ಕುಣಿತ ಮುಂತಾದ ಜಾನಪದ ಕಲೆಗಳಲ್ಲೂ ನಿಸ್ಸೀಮರು.
ರಾಮಚಂದ್ರ ಗೌಡ ಮೂಲತಃ ಅಂಬೈಕೊಡಾರದವರು. ಹಲವು ವರ್ಷಗಳ ಹಿಂದೆ ನೌಕಾನೆಲೆಯಿಂದ ನಿರಾಶ್ರಿತರಾಗಿ ಸಂಪತ್ಭರಿತ ಕೃಷಿಭೂಮಿಯನ್ನು ಕಳೆದುಕೊಂಡು ಅಮದಳ್ಳಿಯಲ್ಲಿ ತಂದೆ ಖರೀದಿಸಿದ ಜಮೀನಿನಲ್ಲಿ ಮನೆ ಮಾಡಿ ಜೀವನ ನಡೆಸುತ್ತಿದ್ದಾರೆ. ಇಲ್ಲಿಯೂ ಅವರು ತಮ್ಮ ರೈತಾಪಿ ಜೀವನವನ್ನು ಬಿಡದೆ ಬೇರೆಯವರ ಹೊಲವನ್ನು ಗೇಣಿಗೆ ಪಡೆದು ಜೀವನ ಸಾಗಿಸುತ್ತಿದ್ದಾರೆ. ಅಮದಳ್ಳಿಯ ಪ್ರಸಿದ್ಧ ಡಿಂಡಿ ಹಬ್ಬದ ಸ್ತಬ್ಧಚಿತ್ರಗಳ (ಹಗರಣ) ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಿಂದ ಬೃಹತ್ ಗಾತ್ರದ ಆನೆ, ಹಡಗು ತಯಾರಿಸಿ ನೆರೆದವರನ್ನು ರಂಜಿಸುತ್ತಾರೆ.
ಬಹುಮುಖ ಪ್ರತಿಭೆಯಾದ ರಾಮಚಂದ್ರ ಗೌಡರು ಬಿಡುವಿನ ಸಮಯದಲ್ಲಿ ಒಣ ಮರದ ದಿಮ್ಮಿಯ ಗುಮ್ಮಟೆಯನ್ನು ತಯಾರಿಸಿಕೊಂಡಿದ್ದಾರೆ. ಸಮಯ ದೊರೆತಾಗಲೆಲ್ಲ ಗುಮ್ಮಟೆ ಕೆತ್ತುವ ಕಾಯಕ ನಡೆಸುತ್ತಿದ್ದ ಇವರು ಅಂತಿಮವಾಗಿ ಸುಂದರವಾದ ಗುಮ್ಮಟೆ ವಾದ್ಯವನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮಚಂದ್ರ ಗೌಡರ ಈ ಕಾರ್ಯ ಅಭಿನಂದನೀಯ ಎಂದು ಸಾಹಿತಿಗಳಾದ ಮುದಗಾದ ಜಿ. ಡಿ. ಗೋವಿಂದಕುಮಾರ ಹೇಳಿದರು.