ಹೊನ್ನಾವರ: ಪ್ರಕೃತಿ ವಿಕೋಪದಂತಹ ಸನ್ನಿವೇಶದಲ್ಲಿ ತುರ್ತು ನೆರವಿಗೆ ಧಾವಿಸಲು ಗ್ರಾಮೀಣ ಮಟ್ಟದ ಶೌರ್ಯ ಪಡೆಯನ್ನು ಧರ್ಮಸ್ಥಳ ಯೋಜನೆ ಸಿದ್ದಮಾಡಿರುವುದು ಉತ್ತಮ ಕಾರ್ಯ ಎಂದು ಒಕ್ಕಲಿಗ ಸಂಘದ ತಾಲೂಕ ಅಧ್ಯಕ್ಷ ತಿಮ್ಮಪ್ಪ ಗೌಡ ಪ್ರಶಂಸೆ ವ್ಯಕ್ತಪಡಿಸಿದರು
ಕೆಳಗಿನೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ/ ಭಟ್ಕಳ, ಜನಜಾಗೃತಿ ವೇದಿಕೆ, ಉಷಾ ವೈರ್ ಸೇಪ್ಟಿ ಪ್ರೈ.ಲಿ ವತಿಯಿಂದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಂಯೋಜಕರು ಮತ್ತು ಸ್ವಯಂ ಸೇವಕರಿಗೆ ಜೀವ ರಕ್ಷಣಾ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆಯ ಜಿಲ್ಲಾ ನಿರ್ದೆಶಕರಾದ ಮಹೇಶ ಎಂ.ಡಿ. ಮಾತನಾಡಿ ನಮ್ಮನ್ನು ನಾವೇ ಹಾಗೂ ಸುತ್ತಮುತ್ತಲಿನವರನ್ನು ರಕ್ಷಣೆಗೆ ಅಣಿಯಾಗಿಸುವ ಕಾರ್ಯ ಇಂದಿನ ತರಬೇತಿ ಸಜ್ಜುಗೊಳಿಸಲಿದೆ ಎಂದರು. ಇನ್ನು ತುರ್ತು ಅನಾಹುತ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮದ ಕುರಿತು ಮಾಹಿತಿ ನೀಡಿದರು.
ಗ್ರಾಮಾಭಿವೃದ್ದಿ ಯೋಜನೆಯಿಂದ ಮಂಜೂರಾದ ವಿವಿಧ ಸುರಕ್ಷತಾ ಸಲಕರಣೆಯನ್ನು ಇದೇ ವೇಳೆ ಹಸ್ತಾಂತರಿಸಲಾಯಿತು. ಮಂಗಳೂರಿನ ಉಷಾ ವೈರ್ ಸೇಪ್ಟಿ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷರಾದ ಕೆ.ಜಗದೀಶ ಅಡಪ ಸ್ವಯಂಸೇವಕರಿಗೆ ತರಬೇತಿ ನೀಡಿದರು.
ಶಿವರಾಜ ಮೇಸ್ತ, ಕೆಳಗಿನೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ಗೌಡ, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಜೈವಂತ ಪಟಗಾರ ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.