ಕಾರವಾರ, ಮಾರ್ಚ್.03: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮತ್ತೊಂದು ಜೀವ ಬಲಿಯಾಗಿದೆ. ಈ ಮೂಲಕ ಮಂಗನ ಕಾಯಿಲೆಗೆ (Kyasanur Forest Disease) ಬಲಿಯಾದವರ ಸಂಖ್ಯೆ ಮೂರಕ್ಕೇರಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹತ್ತರಗಿ ನವಿಲಗಾರ ಗ್ರಾಮದ ವೃದ್ಧ ರಾಮಚಂದ್ರಗೌಡ(68) ಮೃತ ದುರ್ದೈವಿ. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 47 ಜನರಿಗೆ KFD ಸೋಂಕು ತಗುಲಿದೆ.
ಕಳೆದ ಒಂದು ತಿಂಗಳಿನಿಂದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರಕ್ಕೆ ಸಿಮಿತವಾಗಿದ್ದ ಮಂಗನ ಕಾಯಿಲೆ, ಈಗ ಜಿಲ್ಲೆಯ ಅಂಕೊಲಾ ತಾಲೂಕಿಗೆ ವ್ಯಾಪಿಸಿದ್ದೂ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ. ಆದ್ರೆ ಲಸಿಕೆ ಇಲ್ಲದಕ್ಕೆ ಆರೋಗ್ಯ ಇಲಾಖೆಯೂ ಅನಿವಾರ್ಯವಾಗಿ ಮುಂಜಾಗೃತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಮಂಗನ ಕಾಯಿಲೆ ಹೆಚ್ಚಳವಾಗಿದ್ದು ಈ ಬಾರಿ ಮೂವರು ಬಲಿಯಾಗಿದ್ದಾರೆ. ಕೆ.ಎಫ್.ಡಿ ಕಾಯಿಲೆ ಇದೀಗ ಶಿವಮೊಗ್ಗ ನಂತರ ಉತ್ತರ ಕನ್ನಡ ಜಿಲ್ಲೆಯನ್ನು ಮತ್ತೆ ಕಾಡುತ್ತಿದೆ. ಕಳೆದ ಐದು ವರ್ಷದಲ್ಲಿ ಮಂಗನ ಕಾಯಿಲೆಗೆ ಜಿಲ್ಲೆಯಲ್ಲಿ 200 ಕ್ಕೂ ಹೆಚ್ಚುಜನ ತುತ್ತಾದರೇ 8 ಜನ ಈ ಕಾಯಿಲೆಯಿಂದ ಮೃತರಾಗಿದ್ದರು. ಇದೀಗ ಶಿವಮೊಗ್ಗ ಜಿಲ್ಲೆಯ ಗಡಿಯನ್ನು ಹೊಂದುಕೊಂಡಿರುವ ಸಿದ್ದಾಪುರ ತಾಲೂಕಿನ ಕೊರ್ಲಕೈ ,ಬಿಳಗಿ ಗ್ರಾಮವೂ ಸೇರಿದಂತೆ ಒಟ್ಟು 45 ಹಾಗೂ ಅಂಕೋಲಾ ತಾಲೂಕಿನಲ್ಲಿ 1 ಪ್ರಕರಣ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 47 ಕ್ಕೆ ಏರಿಕೆ ಕಾಣುವ ಮೂಲಕ ಮೂವರನ್ನು ಬಲಿ ಪಡೆದಿದೆ.
ಇಷ್ಟು ದಿನ ಸಿದ್ಧಾಪುರಕ್ಕೆ ಸಮಿತವಾಗಿದ್ದ ಮಂಗನ ಕಾಯಿಲೆ ಇದೀಗ ಅಂಕೊಲಾ ಗೂ ವ್ಯಾಪಿಸಿದ ಬಳಿಕ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ. ಇನ್ನೂ ಅಂಕೊಲಾ ತಾಲೂಕಿನ ಮಾವಿನಕೇರಿ ಗ್ರಾಮದ ಕಾಡಿನಂಚಿನಲ್ಲಿರುವ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಕೆ.ಎಫ್ ಡಿ ಕಂಡು ಬಂದಿರುವ ಹಿನ್ನೆಲೆ. ಅಂಕೊಲಾ ತಾಲೂಕಿನಲ್ಲಿ ಮಂಗ ಸಾವನಪ್ಪಿರಬಹುದೆಂದು ಆರೋಗ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಈ ವರ್ಷದ ಪ್ರಾರಂಭದಲ್ಲೇ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮಂಗನಕಾಯಿಲೆ ಖಾತೆ ತೆರೆದಿತ್ತು.ಕಾಯಿಲೆಗೆ ಈ ಹಿಂದೆ ನೀಡಲಾಗುತಿದ್ದ ಲಸಿಕೆಯನ್ನು ಪರಿಣಾಮಕಾರಿ ಅಲ್ಲ ಹಾಗೂ ಗುಣಮಟ್ಟದ ಕಾರಣ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ( CDSCO) ಹಿಂಪಡೆದಿದೆ. ಹೀಗಾಗಿ ಮಂಗನಕಾಯಿಲೆ ಗೆ ಲಸಿಕೆ ಸಹ ಇಲ್ಲ.ಹೀಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಸೊಳ್ಳೆ,ಉಣಗು ,ತಿಗಣೆ ಗಳು ಕಚ್ಚದಂತೆ ತಡೆಯುವ ಡಿ.ಎಮ್.ಪಿ ಆಯಲ್ ನನ್ನು ಮಾತ್ರ ಜನರಿಗೆ ನೀಡುತ್ತಿದ್ದು ಎರಡು ವರ್ಷದಿಂದ ಲಸಿಕೆ ಬಂದ್ ಮಾಡಿದೆ. ಹೀಗಾಗಿ ಜನರಲ್ಲಿ ಸಹ ಲಸಿಕೆ ಇಲ್ಲದ ಕಾರಣ ಸೊಂಕಿನ ಪ್ರಮಾಣ ಸಹ ಗಣನೀಯ ಏರಿಕೆ ಕಂಡಿದೆ.ಇನ್ನು ಈ ಹಿಂದೆ ಸರ್ಕಾರ ಮಂಗನಕಾಯಿಲೆಯಿಂದ ಮೃತರಾದ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿತ್ತು. ಇದರಂತೆ ಶಿವಮೊಗ್ಗ ಜಿಲ್ಲೆಯ ಮೃತರ ಕುಟುಂಬಕ್ಕೆ ಪರಿಹಾರ ನೀಡಿತ್ತು.ಆದರೇ ಉತ್ತರ ಕನ್ನಡ ಜಿಲ್ಲೆಯ ಮೃತರ ಕುಟುಂಬಕ್ಕೆ ಪರಿಹಾರ ಈವರೆಗೂ ಬಿಡುಗಡೆಯಾಗಿಲ್ಲ. ಇನ್ನು ವೈದ್ಯಕೀಯ ಮೂಲಭೂತ ವ್ಯವಸ್ಥೆ ಸಹ ಅಷ್ಟಕಷ್ಟೆ ಆಗಿದ್ದು ಸ್ಥಳೀಯ ಜನರು ಆರೋಗ್ಯ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.