ಏಪ್ರಿಲ್-ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ (Lok Sabha Election) ನಡೆಯುವ ನಿರೀಕ್ಷೆಯಿದೆ. ಚುನಾವಣೆ (Election) ಅಧಿಸೂಚನೆಗೂ ಮೊದಲೇ ಬಿಜೆಪಿ (BJP) ಒಟ್ಟು 543 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ವ್ಯಾಪಕ ಚರ್ಚೆ ನಡೆಸಿದೆ. ಈ ಬಾರಿ ಬಿಜೆಪಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೊಸ ಮಾದರಿ ತಂತ್ರದ ಮೂಲಕ ಅಭ್ಯರ್ಥಿಗಳನ್ನ ಅಖಾಡಕ್ಕಿಳಿಸಲಿದೆ. 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲೆಂದೇ ಶುಕ್ರವಾರ (ಮಾರ್ಚ್.01) ರಂದು ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ನಡೆದಿದ್ದು, ತಂತ್ರ ಹೆಣೆಯಲಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಈ ಬಾರಿ ತಂತ್ರಜ್ಞಾನದ ಮೊರೆ ಹೋಗಿದೆ.
ಮುಖ್ಯವಾಗಿ ಅಭ್ಯರ್ಥಿಗಳ ಆಯ್ಕೆಗೆ ನಮೋ ಆ್ಯಪ್ ಪರಿಚಯಿಸಿ, ಪ್ರತಿ ಕ್ಷೇತ್ರದಲ್ಲೂ ಬಿಜೆಪಿಯ ಮೂರು ಜನಪ್ರಿಯ ನಾಯಕರು ಮತ್ತು ಹಾಲಿ ಸಂಸದರ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗಿದೆ. ಬಿಜೆಪಿ ಕಳೆದೆರಡು ವರ್ಷದಿಂದ ಪ್ರತಿ ಸಂಸದೀಯ ಕ್ಷೇತ್ರದ ವರದಿಗಳನ್ನು ಸಮೀಕ್ಷಾ ಏಜೆನ್ಸಿಗಳಿಂದ ಕೇಳಿ ಪಡೆದಿದೆ. ಅಲ್ಲದೆ ಪ್ರತಿ ಲೋಕಸಭೆ ಕ್ಷೇತ್ರಕ್ಕೆ ತೆರಳಿ ವರದಿಗಳ ಸಂಗ್ರಹ ಮತ್ತು ಹಾಲಿ ಸಂಸದರ ಕಾರ್ಯವೈಖರಿ ಬಗ್ಗೆ ಮೌಲ್ಯಯುತ ಒಳನೋಟ ಒದಗಿಸುವ ಜವಾಬ್ದಾರಿಯನ್ನ ಸಚಿವರಿಗೆ ವಹಿಸಲಾಗಿತ್ತು. ಸಚಿವರು ಮತ್ತು ಸಂಘಟನೆಯಿಂದ ಪಡೆದ ವರದಿಯನ್ನು ರಾಜ್ಯಮಟ್ಟದ ಚುನಾವಣಾ ಸಮಿತಿ ಸಭೆಯಲ್ಲಿರಿಸಲಾಗಿತ್ತು. ಜತೆಗೆ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳು ಆರ್‌ಎಸ್‌ಎಸ್‌ನ ಪ್ರತಿಕ್ರಿಯೆಯನ್ನೂ ಪಡೆಯುತ್ತಿದ್ದರು.
ಹೀಗೆ ರಾಜ್ಯ ಚುನಾವಣಾ ಸಮಿತಿಗಳು ಸಿದ್ಧಪಡಿಸಿದ ಪಟ್ಟಿಯನ್ನ ಪ್ರತಿ ರಾಜ್ಯದ ಕೋರ್ ಗ್ರೂಪ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಜತೆಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಕೇಂದ್ರ ಚುನಾವಣಾ ಸಮಿತಿ ಸಭೆಗೂ ಮುನ್ನ ಪ್ರಧಾನಿ ನಿವಾಸದಲ್ಲಿ ಮೋದಿ, ಶಾ ಮತ್ತು ನಡ್ಡಾ ಸುದೀರ್ಘ ಸಭೆ ನಡೆಸಿದ್ದರು. ಅಲ್ಲೂ ಕೂಡ ಅಭ್ಯರ್ಥಿಗಳ ಹೆಸರು ಚರ್ಚೆಯಾಗಿದೆ. ಬಳಿಕ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ರಾಜ್ಯವಾರು ಅಭ್ಯರ್ಥಿಗಳ ಹೆಸರು ಚರ್ಚಿಸಲಾಗಿದೆ. ಗೆಲ್ಲುವವರು ಬೇರೆ ಪಕ್ಷದದಲ್ಲಿದ್ದರೂ ಅವರನ್ನು ಬಿಜೆಪಿಗೆ ಕರೆತರಲೆಂದೇ ಪ್ರತಿ ರಾಜ್ಯ ಮತ್ತು ಕೇಂದ್ರ ಮಟ್ಟದ ಸೇರ್ಪಡೆ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಫೈಟ್ ಮಾಡುತ್ತೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಿಜೆಪಿ ಮಿತ್ರ ಪಕ್ಷಗಳಿಗೆ ಎಷ್ಟೆಷ್ಟು ಸ್ಥಾನ
ಈ ಬಾರಿ ಚುನಾವಣೆಗೆ ಕನಿಷ್ಠ 60-70 ಹಾಲಿ ಸಂಸದರಿಗೆ ಕೊಕ್ ಕೊಡಲಾಗುತ್ತೆ. ಮೂರು ಬಾರಿ ಗೆದ್ದಿರುವ ಹಲವು ಹಳೆಯ ಸಂಸದರ ಜಾಗದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತಿದೆ. ಆದಾಗ್ಯೂ, ಹೆಚ್ಚಿನ ಒಬಿಸಿ ಸಂಸದರ ಟಿಕೆಟ್‌ಗಳನ್ನು ಕಡಿತಗೊಳಿಸದಿರಲು ಸಭೆಯಲ್ಲಿ ನಿರ್ಧರಿಸಲಾಗಿದೆ. 2019ರಲ್ಲಿ 303 ಬಿಜೆಪಿ ಸಂಸದರಲ್ಲಿ ಒಟ್ಟು 85 ಒಬಿಸಿ ಸಂಸದರು ಗೆದ್ದು ಬಂದಿದ್ದರು. ಯುಪಿಯಲ್ಲಿ ಬಿಜೆಪಿ 6 ಸ್ಥಾನಗಳನ್ನಷ್ಟೇ ತನ್ನ ಮಿತ್ರಪಕ್ಷಗಳಿಗೆ ಬಿಟ್ಟುಕೊಡಲಿದೆ. ಇದರಲ್ಲಿ ತಲಾ 2 ಸ್ಥಾನಗಳು ಅಪ್ನಾ ದಳ ಮತ್ತು ಆರ್‌ಎಲ್‌ಡಿಗೆ ಮತ್ತು ತಲಾ ಒಂದು ಸ್ಥಾನ ನಿಶಾದ್ ಪಕ್ಷ ಮತ್ತು ಓಂಪ್ರಕಾಶ್ ರಾಜ್‌ಭರ್ ಪಕ್ಷಕ್ಕೆ ಮೀಸಲಾಗಿರಲಿವೆ. ಅತ್ತ ಅಸ್ಸಾಂನಲ್ಲಿ ಬಿಜೆಪಿ ತನ್ನ ಮಿತ್ರಪಕ್ಷಗಳಿಗೆ 3 ಸ್ಥಾನಗಳನ್ನು, ಎಜಿಪಿಗೆ 2 ಸ್ಥಾನ ಮತ್ತು ಯುಪಿಪಿಎಲ್‌ಗೆ ಒಂದು ಸ್ಥಾನ ಬಿಟ್ಟುಕೊಡಲು ನಿರ್ಧರಿಸಿದೆ.
ಹಾಗೇ ಹರಿಯಾಣದ ಎಲ್ಲ 10 ಸ್ಥಾನಗಳಲ್ಲೂ ಬಿಜೆಪಿ ಏಕಾಂಗಿ ಹೋರಾಟ ನಡೆಸಲಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ ತನ್ನ ಮಿತ್ರಪಕ್ಷ ಎಜೆಎಸ್‌ಯುಗೆ ಒಂದು ಸ್ಥಾನ ಕೊಡಲಿದೆ. ಇನ್ನು, ಬಿಹಾರದಲ್ಲಿ ಜೆಡಿಯು, ಚಿರಾಗ್ ಪಾಸ್ವಾನ್‌ರ ಎಲ್‌ಜೆಪಿ, ಪಶುಪತಿ ಪರಸ್ ನೇತೃತ್ವದ ಎಲ್‌ಜೆಪಿ, ಉಪೇಂದ್ರ ಕುಶ್ವಾಹಾ ಮತ್ತು ಜಿತನ್ ರಾಮ್ ಮಾಂಝಿ ಜತೆಗೆ ಸೀಟು ಹಂಚಿಕೆ ಅಂತಿಮ ಹಂತದಲ್ಲಿದೆ. ಅತ್ತ ಮಹಾರಾಷ್ಟ್ರದಲ್ಲಿ ಶಿಂಧೆ ಬಣದ ಶಿವಸೇನೆ ಮತ್ತು ಎನ್‌ಸಿಪಿ ಜತೆ ಸೀಟು ಹಂಚಿಕೆ ಇನ್ನೂ ಮುಗಿದಿಲ್ಲ.
ಬಿಜೆಪಿಯ ಈ ನಾಗಾಲೋಟಕ್ಕೆ ಇಂಡಿಯಾ ಮೈತ್ರಿಕೂಟ ಎಷ್ಟರಮಟ್ಟಿಗೆ ತಡೆವೊಡ್ಡುತ್ತೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ