ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ; ನಾಲ್ವರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು, ಮಾರ್ಚ್.02: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.ಗುಪ್ತಚರ ಇಲಾಖೆ ಅಧಿಕಾರಿಗಳು ನಾಲ್ವರ ವಿಚಾರಣೆ ನಡೆಸುತ್ತಿದ್ದಾರೆ.

ಅಬ್ದುಲ್​ ಕಲಾಂ ಅವರ ಸ್ಪೂರ್ತಿಯಿಂದ ತೆರೆದಂತಹ ರಾಮೇಶ್ವರಂ ಕೆಫೆ, ಭಾರತದಾದ್ಯಂತ ಬ್ರಾಂಚ್​ಗಳನ್ನ ಹೊಂದಿದೆ. ರಾಮೇಶ್ವರಂ ಕೆಫೆ ದೇಗುಲದ ಕಾನ್ಸೆಪ್ಟ್​ನಲ್ಲಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲೂ ಹಲವು ಬ್ರಾಂಚ್​ಗಳಿದ್ದು, ಜನ ಸಾಮಾನ್ಯರ ಜೊತೆಗೆ ಐಟಿ ಸಿಬ್ಬಂದಿಯ ಹಾಟ್​ ಫೇವರೆಟ್ ಕೂಡ ಆಗಿದೆ. ಇಂತಹ ಕೆಫೆಯಲ್ಲಿ ನಿನ್ನೆ(01) ಮಧ್ಯಾಹ್ನ ಊಟದ ಸಮಯಕ್ಕೆ ಸರಿಯಾಗಿ ಬಾಂಬ್ ಬ್ಲಾಸ್ಟ್ ಆಗಿದೆ. ವಿವಿಧ ತನಿಖಾ ತಂಡಗಳು ರಾತ್ರಿಯೆಲ್ಲಾ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕೃಷ್ಣಾದಲ್ಲಿ ಸಿದ್ದರಾಮಯ್ಯ ಸಭೆ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಪೊಲೀಸ್​ ಮಹಾ ನಿರ್ದೇಶಕ ಅಲೋಕ್​ ಮೋಹನ್​, ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿ ಹಲವರು ಭಾಗಿಯಾಗಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಸ್ಥಳದಲ್ಲಿ ಬಾಂಬ್ ಸ್ಯಾಂಪಲ್‌ಗಳನ್ನು ಸಂಗ್ರಹ ಮಾಡಲಾಗಿದೆ

ಘಟನೆಯಲ್ಲಿ ಗಾಯಗೊಂಡ 9 ಜನರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದ್ದಾರೆ. ಸದ್ಯ ಯಾರ ಪ್ರಾಣಕ್ಕೂ ತೊಂದರೆ ಇಲ್ಲ. ಸ್ಥಳದಲ್ಲಿ ಬಾಂಬ್ ಸ್ಯಾಂಪಲ್‌ಗಳನ್ನು ಸಂಗ್ರಹ ಮಾಡಲಾಗಿದೆ. ಸದ್ಯಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ಇಲಾಖೆಯ ವರದಿ ಬರುವ ತನಕ ಏನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.