ಕುಮಟಾ: ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಪ್ರತಿ ಮನೆಗಳಲ್ಲಿಯೂ ಆ.13 ರಿಂದ ಆ.15 ರವರೆಗೆ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಕರೆ ನೀಡಿದರು. ಅವರು ಕುಮಟಾ ಪಟ್ಟಣದ ತಾ.ಪಂ ಸಭಾಭವನದಲ್ಲಿ ಹರ್ ಘರ್ ತಿರಂಗಾ ಸಿದ್ಧತೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹರ್ ಘರ್ ತಿರಂಗಾ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ವಿನಂತಿಸಿದ ಅವರು, ಕುಮಟಾ ತಾಲೂಕಿನ ಗ್ರಾಮೀಣ ಭಾಗದ 3,30,504 ಮನೆಗಳು ಹಾಗೂ ಪಟ್ಟಣ ವ್ಯಾಪ್ತಿಯ 6760 ಮನೆಗಳ ಮೇಲೆ ಧ್ವಜ ಹಾರಿಸಬೇಕಿದ್ದು, ಎಲ್ಲ ಮನೆಗಳಿಗೂ ಸರ್ಕಾರದಿಂದ ಧ್ವಜ ನೀಡಲಾಗುತ್ತದೆ. ಪ್ರತಿ ಮನೆ ಹಾಗೂ ಪ್ರತೀ ಇಲಾಖೆಯಲ್ಲಿಯೂ ಧ್ವಜ ಹಾರಾಡಬೇಕು ಎಂದರು.
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಬರ್ಗಿ ಶಾಲೆಯ ಪ್ರತೀಕ್ಷಾ ನಾಯ್ಕ, ಅಘನಾಶಿನಿ ಶಾಲೆಯ ಅಕ್ಷತಾ ನಾಯ್ಕ ಹಾಗೂ ನೆಲ್ಲಿಕೇರಿ ಶಾಲೆಯ ಅನನ್ಯಾ ಹಳದೀಪುರ ಇವರಿಗೆ ಲ್ಯಾಪ್‌ಟಾಪ್‌ಗಳನ್ನು ಶಾಸಕರು ವಿತರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಾಘವೇಂದ್ರ ಜಗಲಸರ್, ತಾ.ಪಂ ಆಡಳಿತಾಧಿಕಾರಿ ಎನ್.ಜಿ.ನಾಯಕ, ತಾ.ಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ, ಪುರಸಭಾ ಮುಖ್ಯಾಧಿಕಾರಿ ಅಜಯ ಭಂಡಾರಕರ್ ಇದ್ದರು.