ಶ್ರಾವಣ ಸೋಮವಾರ ಪ್ರಯುಕ್ತ ಮಹಾಬಲೇಶ್ವರ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ

ಗೋಕರ್ಣ: ಶ್ರಾವಣ ಮಾಸದ ಎರಡನೇ ಸೋಮವಾರ ಪುರಾಣ ಪ್ರಸಿದ್ಧ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆಯಲು ಆಗಮಿಸಿದ್ದರು. ಅವರಲ್ಲಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಭಕ್ತರೇ ಅಧಿಕವಾಗಿದ್ದಾರೆ.

ದೇವಾಲಯದಲ್ಲಿ ಮುಂಜಾನೆ ವಿಶೇಷ ಕಟ್ಲೆ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿತು. ಮುಂಜಾನೆಯಿಂದ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ಭಕ್ತರು ನಿಂತಿದ್ದು, ಶಿವ ಧ್ಯಾನ, ಭಜನೆ ಮಾಡುತ್ತಾ ಆತ್ಮಲಿಂಗ ದರ್ಶನ ಪಡೆದರು. ಇನ್ನು ಮಹಾಗಣಪತಿ ದೇವಸ್ಥಾನದಲ್ಲೂ ಕೂಡ ದೇವರ ದರ್ಶನಕ್ಕೆ ದೊಡ್ಡ ಸಾಲೇ ನಿಂತಿತ್ತು.

ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಪೂಜಾ ಸೇವೆಗೆ ಅವಕಾಶ ಇಲ್ಲದ ಕಾರಣ ಭಕ್ತರು ನಿರಾಸೆಗೊಂಡಿದ್ದು, ಶೀಘ್ರ ಪೂಜಾ ಸೇವೆಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.