ಕುಮಟಾದಲ್ಲಿ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿ: ಗಡಿನಾಡ ಕನ್ನಡಿಗರಿಗೆ ಗೌರವ ಸಮರ್ಪಣೆ

ಕುಮಟಾ: ಕನ್ನಡ ನೆಲ, ಜಲ, ಭಾಷೆಯನ್ನು ರಕ್ಷಿಸುವುದು ಕನ್ನಡಿಗರಾದ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುಮಟಾ ಕನ್ನಡ ಸಂಘ ಆಯೋಜಿಸಿದ ಉತ್ತರಕನ್ನಡ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿ ಉದ್ಘಾಟಿಸಿ, ಗಡಿನಾಡು ಕನ್ನಡಿಗರಿಗೆ ಗೌರವ ಸಮರ್ಪಿಸಿ ಮಾತನಾಡಿದರು.

ರಾಜ್ಯದ ಗಡಿಭಾಗಗಳಲ್ಲಿ ಕನ್ನಡ ಭಾಷೆ ನಶಿಸುತ್ತಿರುವುದು ವಿಷಾದನೀಯ. ಎಲ್ಲ ಭಾಷೆಗಳ ಜನರನ್ನು ಗೌರವದಿಂದ ಕಾಣುವುದು ಕನ್ನಡಿಗರ ಹುಟ್ಟು ಗುಣ. ಕುಮಟಾ ಕನ್ನಡ ಸಂಘ ಯುವ ಕವಿಗೋಷ್ಠಿ ನಡೆಸಿ, ಯುವಕರಿಗೆ ಕನ್ನಡ ಭಾಷೆಯ ಮೇಲೆ ಪ್ರೀತಿ ಹೆಚ್ಚಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡ ಸಾಹಿತಿಗಳಿದ್ದು, ಎಲ್ಲರೂ ಕನ್ನಡ ಭಾಷೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಯುವ ಕವಿಗಳು ಮುನ್ನೆಲೆಗೆ ಬರಲಿ ಎಂದರು.

ಉದ್ಯಮಿ ಸುಬ್ರಾಯ ವಾಳ್ಕೆ ಮಾತನಾಡಿ, ಇಂದಿನ ಯುವಕರು ಕನ್ನಡದ ಮೇಲೆ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕು. ಕನ್ನಡ ಭಾಷೆಯನ್ನು ಪ್ರೀತಿಸಿ, ಇತರ ಭಾಷೆಗಳಿಗೂ ಗೌರವ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ರಾಜ್ಯದ ಗಡಿ ಪ್ರದೇಶಗಳಲ್ಲಿ ಕನ್ನಡ ನಶಿಸಲು ರಾಜಕೀಯ ಕಾರಣ. ರಾಜಕಾರಣಿಗಳು ಇಚ್ಛಾಶಕ್ತಿ ತೋರಿಸಿದರೆ ಗಡಿ ಪ್ರದೇಶಗಳಲ್ಲಿ ಕನ್ನಡ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಗೌರವ ಸಮರ್ಪಣೆ ಸ್ವೀಕರಿಸಿ, ಗಡಿನಾಡ ಕನ್ನಡತಿ ಡಾ.ವಾಣಿಶ್ರೀ ಕಾಸರಗೋಡು ಮಾತನಾಡಿ, ಗಡಿನಾಡು ಕಾಸಗೋಡಿನಲ್ಲಿ ಮಲೆಯಾಳಂ ಭಾಷೆಯ ದೌರ್ಜನ್ಯದಿಂದ ಕನ್ನಡ ಭಾಷೆ ನಾಶವಾಗಿದ್ದು, ಪ್ರತಿನಿತ್ಯ ಕನ್ನಡ ಭಾಷೆಯು ಕ್ಷೀಣಿಸುತ್ತಿದೆ. ಕಾಸರಗೋಡಿನಲ್ಲಿ ಕನ್ನಡ ಅಸ್ತಿತ್ವ ಉಳಿಸಿಕೊಳ್ಳಲು ಗಡಿನಾಡು ಕನ್ನಡ ಸಂಘವನ್ನು ಸ್ಥಾಪನೆ ಮಾಡಿದ್ದೇವೆ. ಸಂಘದ ಮೂಲಕ ಕನ್ನಡ ಭಾಷೆ ಅಭಿವೃದ್ಧಿಗೆ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದ ಅವರು, ಕಾಸರಗೋಡನ್ನು ಕರ್ನಾಟಕದ ಹೊರನಾಡು ಎಂದು ಕರೆಯುತ್ತಾರೆ. ಕರ್ನಾಟಕದ ಒಂದು ಭಾಗವಾದ್ದರಿಂದ ಒಳನಾಡು ಎಂದು ಕರೆಯುವ ಬಗ್ಗೆ ಸರ್ಕಾರದ ಮೇಲೆ ಶಾಸಕರು ಒತ್ತಡ ಹೇರಬೇಕು ಎಂದು ವಿನಂತಿಸಿದರು.

ವಿದ್ಯಾರ್ಥಿನಿ ನಿಶಾ ನಾಯ್ಕ ಸಿದ್ದಾಪುರ ಪ್ರದರ್ಶಿಸಿದ ಯಕ್ಷಗಾನ ನೃತ್ಯ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಯಿತು. ನಂತರ ನಡೆದ ಯುವ ಕವಿಗಳ ಕವಿಗೋಷ್ಠಿಯಲ್ಲಿ ಬರಹಗಾರ್ತಿ ಶ್ರೀದೇವಿ ಕೆರೆಮನೆ ಅಧ್ಯಕ್ಷತೆ ವಹಿಸಿದ್ದರು.