ಹುಲಿ ಉಗುರಿನ ಪ್ರಕರಣದ ಬಗ್ಗೆ ಮಾತನಾಡುವಾಗ ಜಗ್ಗೇಶ್ ಅವರು ‘ಕಿತ್ತೋದ್ ನನ್ ಮಗ’ ಎಂದು ಹೇಳಿದ್ದು ವರ್ತೂರು ಸಂತೋಷ್ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿತ್ತು. ಕೆಲವರು ಜಗ್ಗೇಶ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಜಗ್ಗೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ನಟ ಜಗ್ಗೇಶ್ (Jaggesh) ಅವರು ಇತ್ತೀಚೆಗೆ ವರ್ತೂರು ಸಂತೋಷ್ ಬಗ್ಗೆ ಆಡಿದ ಮಾತುಗಳು ವಿವಾದಕ್ಕೆ ಕಾರಣ ಆಗಿವೆ. ಹುಲಿ ಉಗುರಿನ ಕೇಸ್ಗೆ ಸಂಬಂಧಿಸಿದಂತೆ ‘ರಂಗನಾಯಕ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ‘ಕಿತ್ತೋದ್ ನನ್ ಮಗ’ ಎಂಬ ಪದವನ್ನು ಜಗ್ಗೇಶ್ ಬಳಕೆ ಮಾಡಿದ್ದರು. ಅದನ್ನು ಖಂಡಿಸಿ ವರ್ತೂರು ಸಂತೋಷ್ (Varthur Santhosh) ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಗ್ಗೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಿ, ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಹೆಬ್ಬಗೋಡಿಯ ನಾರಾಯಣಸ್ವಾಮಿ ಮತ್ತು ಇನ್ನೋರ್ವ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜಾತಿನಿಂದನೆ ,ಅವಾಚ್ಯ ಪದಗಳ ಬಳಕೆ, ಮುಖಕ್ಕೆ ಮಸಿ ಬಳಿಯುವ ಬೆದರಿಕೆ ಹಾಕಲಾಗಿದೆ ಎಂದು ಜಗ್ಗೇಶ್ ಅವರು ಆರೋಪ ಮಾಡಿದ್ದಾರೆ. ‘ತಪ್ಪು ಸಂದೇಶ ಕೊಟ್ಟು ಜಾತಿ ಗಲಭೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡಲಾಗುತ್ತಿದೆ. ಕಿತ್ತೋದ್ ನನ್ ಮಗ ಎಂಬುದು ಗ್ರಾಮೀಣ ಭಾಷೆಯಾಗಿದ್ದು, ಅದನ್ನು ತಿರುಚಿ ಪ್ರಚೋದಿಸಲಾಗುತ್ತಿದೆ’ ಎಂದು ಜಗ್ಗೇಶ್ ದೂರು ನೀಡಿದ್ದಾರೆ.
ಜಗ್ಗೇಶ್ ಅವರು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಲಾಕೆಟ್ ಧರಿಸಿ ಬಿಗ್ ಬಾಸ್ ಮನೆಗೆ ಹೋಗಿದ್ದಾಗ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಹುಲಿ ಉಗುರು ಹೊಂದಿದ ಆರೋಪದಲ್ಲಿ ಅನೇಕ ಸೆಲೆಬ್ರಿಟಿಗಳು ಕಾನೂನಿನ ಸಂಕಷ್ಟ ಎದುರಿಸಿದ್ದರು. ಜಗ್ಗೇಶ್ ಅವರಿಗೂ ನೋಟಿಸ್ ನೀಡಲಾಗಿತ್ತು. ಆ ಘಟನೆಯನ್ನು ನೆನಪಿಸಿಕೊಂಡು ‘ರಂಗನಾಯಕ’ ಸುದ್ದಿಗೋಷ್ಠಿಯಲ್ಲಿ ಜಗ್ಗೇಶ್ ಇತ್ತೀಚೆಗೆ ಮಾತನಾಡುವಾಗ ‘ಕಿತ್ತೋದ್ ನನ್ ಮಗ’ ಎಂಬ ಪದಬಳಕೆ ಮಾಡಿದ್ದರು.
ವರ್ತೂರು ಸಂತೋಷ್ ಪ್ರತಿಕ್ರಿಯೆ ಏನು?
ಜಗ್ಗೇಶ್ ಅವರ ಹೇಳಿಕೆ ವೈರಲ್ ಆದ ಬಳಿಕ ವರ್ತೂರು ಸಂತೋಷ್ ಅವರು ಪ್ರತಿಕ್ರಿಯೆ ನೀಡಿದರು. ‘ಅವರು ದೊಡ್ಡವರು ಬಿಡಿ. ನಾನು ಹೇಳೋಕೆ ಇಚ್ಛಿಸುವುದು ಇಷ್ಟೇ.. ಕಾಲಾಯ ತಸ್ಮೈ ನಮಃ. ಎಲ್ಲದಕ್ಕೂ ನಾವು ಉತ್ತರ ಕೊಡಲೇಬೇಕು ಅಂತೇನಿಲ್ಲ. ಕೆಲವೊಂದಕ್ಕೆ ಉತ್ತರ ಕೊಡಬೇಕು, ಕೆಲವೊಂದಕ್ಕೆ ಮೌನವಾಗಿ ಇದ್ದರೆ ಸಾಕು. ಉತ್ತರ ಸಿಗುತ್ತದೆ’ ಎಂದರು.
ಬಿಗ್ ಬಾಸ್ಗೆ ಕಾಲಿಟ್ಟ ಬಳಿಕ ವರ್ತೂರು ಸಂತೋಷ್ ಅವರ ಖ್ಯಾತಿ ಹೆಚ್ಚಾಗಿದೆ. ಹಳ್ಳಿಕಾರ್ ತಳಿಯ ಸಂರಕ್ಷಣೆ ಮಾಡುವ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋನಲ್ಲಿ ಅವರು ಫಿನಾಲೆ ತನಕ ಸ್ಪರ್ಧಿಸಿದರು. ದೊಡ್ಮನೆಯಿಂದ ಹೊರಬಂದ ಬಳಿಕ ಅವರಿಗೆ ಜನರು ಪ್ರೀತಿ ತೋರಿಸುತ್ತಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅವರ ಬಗ್ಗೆ ಜಗ್ಗೇಶ್ ಮಾತನಾಡಿದ ರೀತಿಯನ್ನು ಅನೇಕರು ಖಂಡಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಆಗುತ್ತಿದೆ.