ಅಂಕೋಲಾ ಪುರಸಭೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ

ಅಂಕೋಲಾ : ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ಸೋಮವಾರ ಸಹಾಯಕ ಆಯುಕ್ತರಾದ ಕಲ್ಯಾಣಿ ಕಾಂಬ್ಳೆ ಅಧ್ಯಕ್ಷತೆಯಲ್ಲಿ 2024-2 5ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ನಡೆಯಿತು. ಪ್ರಸ್ತಾವಿತ 2024-25ನೇ ಸಾಲಿನ ನಿರೀಕ್ಷಿತ ಆಯವ್ಯಯ ಪಟ್ಟಿಯ ಪ್ರಕಾರ ₹ 7,16,86,000 ಆದಾಯ ನಿರೀಕ್ಷೆಯಿದ್ದು, ಅಂದಾಜು ವೆಚ್ಚ ₹ 6,97,73,000 ಆಗಿದೆ. ₹19,13, 000ದಷ್ಟು ಮಿಗುತೆ ಮುಂಗಡ ಪತ್ರ ಇದಾಗಿದ್ದು ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ತತ್ವಕ್ಕೆ ಪುರಸಭೆ ಬದ್ಧವಾಗಿದೆ.

ವಿದ್ಯುತ್ ಅನುದಾನ ಮತ್ತು ವೇತನ ಅನುದಾನವನ್ನು ಹೊರತು ಪಡಿಸಿ ನೀರಿನ ಕರದಿಂದ ಅತಿ ಹೆಚ್ಚು ಆದಾಯ(₹1.10ಕೋಟಿ) ನಿರೀಕ್ಷೆ ಮಾಡಲಾಗಿದೆ. ಆಸ್ತಿ ತೆರಿಗೆ, ಮಳಿಗೆ ಬಾಡಿಗೆ, ಮಾರುಕಟ್ಟೆ ಶುಲ್ಕ, ಆಸ್ತಿ ತೆರಿಗೆ ಮೇಲಿನ ಘನತ್ಯಾಜ್ಯ ಉಪಕರ, ಕಟ್ಟಡ ಪರವಾನಗಿ ಶುಲ್ಕ, ಅಭಿವೃದ್ಧಿ ಶುಲ್ಕಗಳು ಮುಂಬರುವ ಹಣಕಾಸು ವರ್ಷದಲ್ಲಿ ಹೆಚ್ಚಿನ ಆದಾಯ ತರುವ ಮೂಲಗಳೆಂದು ನಿರೀಕ್ಷಿಸಲಾಗಿದೆ.

ಖರ್ಚಿನ ವಿಭಾಗದಲ್ಲಿ ನೀರು ಸರಬರಾಜು ದುರಸ್ತಿ ನಿರ್ವಹಣೆಗೆ ₹1.45 ಕೋಟಿ ಮೀಸಲಿಡಲಾಗಿದೆ. ಹೊರಗುತ್ತಿಗೆ ನೌಕರರ ಸೇವಾ ಶುಲ್ಕ, ಸಾಮಾನ್ಯ ನಿಧಿಯ ಕಾಮಗಾರಿ ಬಿಲ್, ನೀರು ಸರಬರಾಜು ಹೊರಗುತ್ತಿಗೆ ವೇತನ, ಇಂಧನ ವೆಚ್ಚಕ್ಕಾಗಿ ಹೆಚ್ಚಿನ ಪ್ರಮಾಣದ ಆದಾಯವನ್ನು ನಿಗದಿಪಡಿಸಲಾಗಿದೆ. ಕಚೇರಿ ಕಾರ್ಯಕ್ರಮ ಮತ್ತು ಕಚೇರಿಯ ವೆಚ್ಚಕ್ಕಾಗಿ ಮುಂಬರುವ ವರ್ಷದಲ್ಲಿ ₹18.50 ಲಕ್ಷ ಮೀಸಲಿಡಲಾಗಿದೆ.

15ನೇ ಹಣಕಾಸು, ಎಸ್. ಎಫ್.ಸಿ,ನಲ್ಮ್ ಮತ್ತಿತರ ಮೂಲಗಳಿಂದ 2023ರ ಮಾರ್ಚ್ ತಿಂಗಳಿನಿಂದ ಡಿಸೆಂಬರ್ ವರೆಗೆ ₹1.70 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹1.53 ಕೋಟಿ ಖರ್ಚು ಮಾಡಲಾಗಿದೆ. 2024-25 ನೇ ಸಾಲಿನಲ್ಲಿ ₹12 ಕೋಟಿ ವಿಶೇಷ ಅನುದಾನ ಅಪೇಕ್ಷೆ ಮಾಡಲಾಗಿದೆ.

ಬಜೆಟಿನ ಪೂರ್ವಭಾವಿ ಸಭೆಯಲ್ಲಿ ಹಿಂದಿನ ವರ್ಷದ ಖರ್ಚು ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ಪುರಸಭೆಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮುಂಬರುವ ವರ್ಷದಲ್ಲಿ ಕಡಿಮೆ ಪ್ರಮಾಣದಲ್ಲಿ ನೀರಿನ ಕರ ಹೆಚ್ಚಿಸುವಂತೆ ಪುರಸಭೆ ಸದಸ್ಯ ಕಾರ್ತಿಕ್ ನಾಯ್ಕ ಹೇಳಿದರು. ರಸ್ತೆ ಬದಿಯ ಗೂಡಂಗಡಿ ಪರವಾನಿಗೆ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಸ್ಪಷ್ಟ ನಿಲುವುಗಳಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಚೇತನ ನಾಯಕ ಆಕ್ಷೇಪ ವ್ಯಕ್ತಪಡಿಸಿದರು. ತರಕಾರಿ ಮಾರುಕಟ್ಟೆಯ ಕರ ವಸೂಲಿಗೆ ಸಂಬಂಧಿಸಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ಶುಲ್ಕದ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ಲಗತ್ತಿಸಬೇಕು ಎಂದು ಸದಸ್ಯರು ಮತ್ತು ಸಾರ್ವಜನಿಕರು ಆಗ್ರಹಿಸಿದರು.

ಧಾರ್ಮಿಕ ಕಾರ್ಯಕ್ರಮಗಳ ಸಾರ್ವಜನಿಕ ಜಾಹಿರಾತುಗಳನ್ನು ಹೊರತುಪಡಿಸಿ ವೈಯಕ್ತಿಕ ಭಾವಚಿತ್ರ ಹೊಂದಿರುವ ಜಾಹೀರಾತುಗಳಿಗೆ ಶುಲ್ಕ ವಿಧಿಸುವಂತೆ ಕಾರ್ತಿಕ ನಾಯ್ಕ್ ತಿಳಿಸಿದರು. ಶಿರಕುಳಿಯ ರಸ್ತೆ ವ್ಯವಸ್ಥೆ ಸರಿಪಡಿಸುವಂತೆ ಹಲವು ದಿನಗಳಿಂದ ಆಗ್ರಹಪಡಿಸುತ್ತಲೇ ಇದ್ದರೂ ಟೆಂಡರ್ ಪಡೆದವರು ಕಾಮಗಾರಿಗೆ ಚಾಲನೆ ನೀಡಿಲ್ಲ ಎಂದು ಸಾರ್ವಜನಿಕರೊಬ್ಬರು ದೂರಿದರು. ಸದಸ್ಯೆ ತಾರಾ ನಾಯ್ಕ ಇದಕ್ಕೆ ಧ್ವನಿಗೂಡಿಸಿ ಮಳೆಗಾಲ ಆರಂಭವಾಗುವುದರೊಳಗೆ ಸರಿಪಡಿಸಿ. ಇಲ್ಲವಾದರೆ ಸಾರ್ವಜನಿಕರಿಗೆ ಅಧಿಕಾರಿಗಳು ಉತ್ತರಿಸಬೇಕು ಎಂದರು. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು ಟೆಂಡರ್ ಪಡೆದ ವ್ಯಕ್ತಿಯೂ ಕಾಮಗಾರಿಗೆ ಚಾಲನೆ ನೀಡಿದ ಹಿನ್ನೆಲೆ ಅದನ್ನು ರದ್ದುಪಡಿಸಲಾಗಿದೆ. ಪುನಃ ಟೆಂಡರ್ ಪ್ರಕ್ರಿಯೆ ಆರಂಭಿಸಿ ಸರಿಪಡಿಸಲಾಗುವುದು ಎಂದರು.

ದೂರವಾಣಿ ಬಿಲ್ ಹೆಚ್ಚಿರುವುದಕ್ಕೆ ಪ್ರಶ್ನಿಸಿದ ಸದಸ್ಯ ಜಯಪ್ರಕಾಶ ನಾಯ್ಕ, ಇಂಟರ್ನೆಟ್ ಸೌಲಭ್ಯ ಕಡಿಮೆ ವೆಚ್ಚದಲ್ಲಿ ದೊರೆಯುತ್ತದೆ. ಆನ್‌ಲೈನ್‌ನಲ್ಲಿ ಪುರಸಭೆಯ ದೂರವಾಣಿ ಬಿಲ್ ಪಾವತಿ ಕಡಿಮೆ ಕಾಣಿಸುತ್ತಿದ್ದು ಮುಂಗಡಪತ್ರದಲ್ಲಿ ಅದರ ಪ್ರಮಾಣ ಹೆಚ್ಚಾಗಿದೆ ಎಂದರು.

ಜಾಣತನ ಪ್ರದರ್ಶಿಸಿದ ಪುರಸಭೆ ಮುಖ್ಯಾಧಿಕಾರಿ

ಮುಂಗಡ ಪತ್ರದ ಬಾಬ್ತುಗಳಿಗೆ ಸಂಬಂಧಿಸಿದಂತೆ ಸದಸ್ಯರು ಪ್ರಶ್ನಿಸಿದ ವೇಳೆ ಮುಖ್ಯಾಧಿಕಾರಿ, ಆಯಾ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉತ್ತರಿಸಿ ಎಂದು ತಾವು ಜಾರಿಕೊಂಡರು. ಬಜೆಟ್ ಸಿದ್ಧಪಡಿಕೆಯಲ್ಲಿನ ಲೋಪಗಳ ಕುರಿತು ಪ್ರಶ್ನಿಸಿದಾಗ ಅದನ್ನು ತಯಾರಿಸಿದ ಸಿಬ್ಬಂದಿಗಳಿಗೆ ಉತ್ತರಿಸುವಂತೆ ತಿಳಿಸಿದರು. ಪೂರ್ವಭಾವಿ ಸಭೆಯಲ್ಲಿ ಬಜೆಟ್ ಬಗ್ಗೆ ಚರ್ಚಿಸಲಾಗುತ್ತಿದ್ದರೂ ಈ ಮೊದಲೇ ಆಯವ್ಯಯಗಳ ವಿವರಗಳನ್ನು ಮುಖ್ಯಾಧಿಕಾರಿ ಗಮನಿಸದೆ ಸಭೆಗೆ ಬಂದಿದ್ದರೇ? ಸಿಬ್ಬಂದಿಗಳು ತಪ್ಪು ಮಾಡಿದ್ದಾಗಲೂ ತಿದ್ದಿಲ್ಲವೇ? ಬಜೆಟ್ ತಯಾರಿಯಲ್ಲಿ ಅವರ ಅಧಿಕಾರ ಅಥವಾ ಪಾತ್ರವೂ ಇಲ್ಲವೇ ಎಂದು ಸಭೆಯಲ್ಲಿದ್ದವರಿಗೆ ಪ್ರಶ್ನೆಯಾಗಿತ್ತು..