ಬೃಹತ್ ಉದ್ಯೋಗ ಮೇಳ, 50000 ಕ್ಕೂ ಹೆಚ್ಚು ಉದ್ಯೋಗವಕಾಶ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

 ಕಾರವಾರ:- ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ದಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಟಕ ಕೌಶಲ್ಯ ಅಭಿವೃಧ್ದಿ ನಿಗಮದ ಮೂಲಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 26 ಮತ್ತು 27 ರಂದು ನಡೆಯುವ ಯುವ ಸಮೃದ್ದಿ ಸಮ್ಮೇಳನ ಬೃಹತ್ ಉದ್ಯೋಗ ಮೇಳದಲ್ಲಿ 50000 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಲಾಗುತ್ತಿದ್ದು, ಜಿಲ್ಲೆಯ ಯುವಜನತೆ ಇದರಲ್ಲಿ ಭಾಗವಹಿಸಿ ತಮ್ಮ ಆಯ್ಕೆಯ ಉದ್ಯೊಗ ಪಡೆಯುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

  ಅವರು ಇಂದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಈ ಉದ್ಯೋಗ ಮೇಳದಲ್ಲಿ ವಿವಿಧ ಪ್ರತಿಷ್ಠಿತ 500 ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುತ್ತಿದ್ದು, ವಿದ್ಯಾರ್ಹತೆಗೆ ಅನುಗುಣವಾಗಿ 50000 ಕ್ಕೂ ಹೆಚ್ಚು ಉದ್ಯೋಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದ್ದು, ಸ್ಥಳದಲ್ಲೇ 20000 ಕ್ಕೂ ಹೆಚ್ಚು ನೇಮಕಾತಿ ಆದೇಶ ಪತ್ರಗಳ ವಿತರಣೆ ನಡೆಯಲಿದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ಕಾರ್ಮಿಕ ವೇತನ ನಿಯಮದಂತೆ ಕನಿಷ್ಠ ವೇತನದ ಜೊತೆಗೆ ಗರಿಷ್ಠ ಆಕರ್ಷಕ ವೇತನ ಪ್ಯಾಕೇಜ್ ಕೂಡ ಲಭ್ಯವಾಗಲಿದೆ ಎಂದರು.

 ಉದ್ಯೋಗ ಮೇಳದಲ್ಲಿ ಭಾಗವಹಿಸುವ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು https://skillconnect.kaushalkar.com ನಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುವAತೆ ತಿಳಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ 1800 599 9918 ಗೆ ಬೆಳಗ್ಗೆ 10 ರಿಂದ 6 ರ ವರೆಗೆ ಸಂಪರ್ಕಿಸಬಹುದು ಎಂದರು.

 ಯುವಜನತೆ ಸರ್ಕಾರಿ ಉದ್ಯೋಗಗಳಿಗಾಗಿ ಕಾಯುತ್ತ ತಮ್ಮ ವಯೋಮಿತಿಯನ್ನು ಮೀರುವ ಬದಲು ಖಾಸಗಿ ವಲಯದಲ್ಲಿರುವ ಅಕರ್ಷಕ ಮತ್ತು ಉತ್ತಮ ವೇತನ ಪ್ಯಾಕೇಜ್ ಗಳಿರುವ ಉದ್ಯೋಗಗಳನ್ನು ಪಡೆಯುವ ಮೂಲಕ ಜೀವನದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಈ ಬೃಹತ್ ಉದ್ಯೋಗ ಮೇಳದಲ್ಲಿ ತಮ್ಮ ಆಯ್ಕೆಯ ಕಂಪನಿಗಳನ್ನು ಮತ್ತು ವೇತನ ಪ್ಯಾಕೇಜ್ ಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಇಷ್ಟದ ಉದ್ಯೋಗ ಪಡೆಯಬಹುದಾಗಿದೆ ಎಂದರು.

ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ನಿರ್ದಿಷ್ಠ ವಿದ್ಯಾರ್ಹತೆ ಹಾಗೂ ವಯೋಮಾನದ ಮಿತಿಯಿಲ್ಲದ ಕಾರಣ ಎಲ್ಲಾ ವಯೋಮಾನದ ಮತ್ತು ಯಾವುದೇ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ ಎಂದರು.

ಈ ಬೃಹತ್ ಉದ್ಯೋಗ ಮೇಳದ ಕುರಿತಂತೆ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ, ನಗರ ಸ್ಥಳೀಯಸಂಸ್ಥೆಗಳಲ್ಲಿ, ಗ್ರಾಮ ಪಂಚಾಯತ್ ಗಳಲ್ಲಿ ಹೆಚ್ಚಿನ ಪ್ರಚಾರ ನೀಡುವ ಮೂಲಕ ಜಿಲ್ಲೆಯಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಜಿಲ್ಲೆಯ ಅಭ್ಯರ್ಥಿಗಳಿಗೆ ಗರಿಷ್ಠ ಉದ್ಯೋಗ ದೊರೆಯುವಂತೆ ಆಗಬೇಕು ಎಂದರು.

            ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್ , ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಜಿ.ಟಿ ನಾಯ್ಕ್, ಜಿಲ್ಲಾ ಉದ್ಯೋಗಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತದ್ದರು.