ದಾಂಡೇಲಿ : ಸಮಾಜ ಕಲ್ಯಾಣ ಇಲಾಖೆ, ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಸ್.ಸಿ.ಎ ಮತ್ತು ಎಸ್.ಸಿ.ಎಸ್.ಪಿ ಅನುದಾನದಡಿ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರಕ್ಕೆ ಭಾನುವಾರ ಶಾಸಕರಾದ ಆರ್.ವಿ.ದೇಶಪಾಂಡೆಯವರು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ ಅವರು 60 ದಿನಗಳವರೆಗೆ ನಡೆಯಲಿರುವ ಈ ತರಬೇತಿಯಲ್ಲಿ ಸಕ್ರಿಯರಾಗಿ ಭಾಗವಹಿಸಿ ಈ ತರಬೇತಿಯ ಪ್ರಯೋಜನವನ್ನು ಪಡೆದು, ಸ್ವ ಉದ್ಯೋಗಿಗಳಾಗಿ ಜೀವನದಲ್ಲಿ ಯಶಸ್ಸನ್ನು ಕಾಣುವಂತೆ ಶುಭವನ್ನು ಹಾರೈಸಿದರು. ಸ್ವ ಉದ್ಯೋಗದಿಂದ ಸ್ವಾಭಿಮಾನದ ಬದುಕಿನ ಜೊತೆಗೆ ಆತ್ಮತೃಪ್ತಿ ಸಿಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಇಂದು ಸ್ವಉದ್ಯೋಗಕ್ಕೆ ಹೆಚ್ಚಿನ ಅವಕಾಶಗಳಿದ್ದು, ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಸಂಯೋಜಕರಾದ ಟಿ.ಮಲ್ಲಿಕಾರ್ಜುನ ಅವರು ತರಬೇತಿ ಕಾರ್ಯಕ್ರಮದ ಉದ್ದೇಶ, ತರಬೇತಿಯಾದ ಬಳಿಕ ಸಮಾಜ ಕಲ್ಯಾಣ ಇಲಾಖೆ, ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರಣೆಯನ್ನು ನೀಡಿ, ಈ ತರಬೇತಿಯನ್ನು ಯಶಸ್ವಿಗೊಳಿಸಬೇಕೆಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ್, ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ತಾಲ್ಲೂಕು ಪಂಚಾಯ್ತು ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಹಾಲಮನ್ನವರ್, ಪ್ರಮುಖರುಗಳಾದ ಸಂತೋಷ್ ಕುಮಾರ್ ಸವಣೂರು, ಅವಿನಾಶ್ ಘೋಡ್ಕೆ, ಹೂವಪ್ಪ, ರಾಜಶೇಖರ್ ನಿಂಬಾಳ್ಕರ್ ಮೊದಲಾದವರು ಉಪಸ್ಥಿತರಿದ್ದರು.
ಮಾಜಿ ನಗರ ಸಭಾ ಸದಸ್ಯರಾದ ಸತೀಶ್ ನಾಯ್ಕ ಅವರು ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮಕ್ಕೆ ಶ್ರೀಮಂತ ಮದರಿ ವಂದಿಸಿದರು.



